ಬಾಗಲಕೋಟೆ: ಜಿಲ್ಲಾ ಹಾಗೂ ಅಧೀನ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ನಾಲ್ಕು ಜೋಡಿಗಳು ಶನಿವಾರ ನಡೆದ ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ಪುನರ್‌ಮಿಲನ ಮಾಡಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಅಜಯಕುಮಾರ ಲಮಾಣಿ ಹಾಗೂ ಕಾಜೋಲ ದಂಪತಿ ವಿಚ್ಛೇದನ ಕೋರಿ ನ್ಯಾಯಾಲಯ ಮೊರೆ ಹೋಗಿದ್ದರು. ಜಿಲ್ಲಾ ಕುಟುಂಬ ನ್ಯಾಯಾಲಯದಲ್ಲಿ ಜೋಡಿ ಮಾಡಲಾಯಿತು. ಜೋಡಿಗೆ ಪರಸ್ಪರ ಹಾರ ಹಾಕಿಸಿ, ಸಿಹಿ ತಿನಿಸಲಾಯಿತು.
ಅಜಯಕುಮಾರ ಪರ ರಿಯಾನಾ ಕುಂಟೋಜಿ, ಕಾಜೋಲ ಪರ ಜಿ.ಎಸ್.ರಾಠೋಡ ವಕಾಲತು ವಹಿಸಿದ್ದರು. ಬನಹಟ್ಟಿ, ಮುಧೋಳ ಹಾಗೂ ಜಮಖಂಡಿ ನ್ಯಾಯಾಲಯದಲ್ಲಿಯೂ ತಲಾ ಒಂದು ವಿಚ್ಛೇದನ ಜೋಡಿಗಳು ಒಂದಾದರು.
ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ 7,984 ಪೈಕಿ 5,815 ಹಾಗೂ ವಾಜ್ಯ ಪೂರ್ವ ಬಾಕಿ ಇರುವ 20,028 ಪ್ರಕರಣಗಳ ಪೈಕಿ 17,555 ಪ್ರಕರಣ ಸೇರಿ ಒಟ್ಟು 23,370 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು. ಒಟ್ಟು ₹32.05 ಕೋಟಿ ಪ್ರಕರಣದ ಮೊತ್ತವಾಗಿದೆ.
ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ 2,288 ಪ್ರಕರಣಗಳ ಪೈಕಿ 1,739, ಬೀಳಗಿ ನ್ಯಾಯಾಲಯದಲ್ಲಿ 277 ಪೈಕಿ 229, ಮುಧೋಳ ನ್ಯಾಯಾಲಯದಲ್ಲಿ 692 ಪೈಕಿ 519, ಬನಹಟ್ಟಿ ನ್ಯಾಯಾಲಯದಲ್ಲಿ 1,429 ಪೈಕಿ 1,004, ಹುನಗುಂದ ನ್ಯಾಯಾಲಯದಲ್ಲಿ 476 ಪೈಕಿ 327, ಇಳಕಲ್ ನ್ಯಾಯಾಲಯದಲ್ಲಿ 501 ಪೈಕಿ 358, ಬಾದಾಮಿ ನ್ಯಾಯಾಲಯದಲ್ಲಿ 1,267 ಪೈಕಿ 870 ಹಾಗೂ ಜಮಖಂಡಿ ನ್ಯಾಯಾಲಯದಲ್ಲಿ 1,227 ಪೈಕಿ 741 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.
ಬ್ಯಾಂಕ್, ವಿದ್ಯುತ್ ಕಾಯ್ದೆಗೆ ಸಂಬಂಧಿಸಿದ 201 ಪ್ರಕರಣಗಳು ಮೊತ್ತ ₹7.8 ಲಕ್ಷಕ್ಕೆ ಇತ್ಯರ್ಥಗೊಂಡರೆ, ನೀರಿನ ಕರಕ್ಕೆ ಸಂಬಂಧಿಸಿದ 643 ಪೈಕಿ 273 ಪ್ರಕರಣಗಳು ₹4.02 ಲಕ್ಷಕ್ಕೆ, ಕಂದಾಯ ಇಲಾಖೆಗೆ ಸಂಬಂಧಿಸಿದ 649 ಪೈಕಿ 599 ಪ್ರಕರಣ, ಸಂಚಾರಿ ಉಲ್ಲಂಘನೆಗೆ ಸಂಬಂಧಿಸಿದ 11,143 ಪ್ರಕರಣಗಳು ₹32.84 ಲಕ್ಷ, ಆಸ್ತಿ ತೆರಿಗೆ ಸಂಬಂಧಿಸಿದಂತೆ 5,077 ಪ್ರಕರಣಗಳು ₹4.2 ಕೋಟಿ ಪರಿಹಾರ ಕೊಡಿಸಲಾಯಿತು.
ಸಾಲ ವ್ಯವಹಾರಕ್ಕೆ ಸಂಬಂಧಿಸಿದ 672 ಪ್ರಕರಣ ಪೈಕಿ 156 ಪ್ರಕರಣಕ್ಕೆ ₹4.82 ಕೋಟಿಗೆ ಸೆಟೆಲ್ ಮಾಡಲಾಯಿತು. ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದ 1,239 ಪೈಕಿ 1,120 ಪ್ರಕರಣಗಳನ್ನು ₹2.1 ಲಕ್ಷಕ್ಕೆ ಇತ್ಯರ್ಥ ಪಡಿಸಲಾಯಿತು.
ಲೋಕ ಅದಾಲತ್ ಶಿಬಿರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ರೆಹಮಾನ್, ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧಿಶ ಜಿ.ಎ.ಮೂಲಿಮನಿ, ಜಿಲ್ಲಾ ಕುಟುಂಬ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, ಒಂದನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ, ಎರಡನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶ ಮಹೇಶ ಪಾಟೀಲ, ಪ್ರಧಾನ ದಿವಾನಿ ನ್ಯಾಯಾಧೀಶ ಮುರಗೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪೂರ ಇದ್ದರು.
ಜಮೀನು ಹಂಚಿಕೆಗೆ ಸಂಬಂಧಿಸಿದಂತೆ 12 ವರ್ಷಗಳಿಂದ ಇತ್ಯರ್ಥವಾಗದ ಪ್ರಕರಣವನ್ನು ಬನಹಟ್ಟಿ ತಾಲ್ಲೂಕಿನ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಇತ್ಯರ್ಥ ಪಡಿಸಲಾಯಿತು. ಸೋರೆಗೊಪ್ಪ ಗ್ರಾಮದ ಪ್ರಕರಣದಲ್ಲಿ ಜಮೀನನ್ನು ಹಂಚಿಕೆ ಮಾಡಲಾಯಿತು. ಇದಕ್ಕೆ ಎಲ್ಲರೂ ಸಮ್ಮತಿಸಿದರು. ಜಮಖಂಡಿ ನ್ಯಾಯಾಲಯದಲ್ಲಿ 2009 ಹಾಗೂ ಮುದೋಳದಲ್ಲಿ 2010ಕ್ಕೆ ದಾಖಲಾದ ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.