ADVERTISEMENT

ಬಾಗಲಕೋಟೆ: ಸಿದ್ದರಾಮಯ್ಯ ಸರ್ಜರಿ, ಅಧಿಕಾರಿಗಳು ತತ್ತರ

ಬಾದಾಮಿ ತಹಶೀಲ್ದಾರ್, ಇಒ, ಸಿಪಿಐ, ಬಿಇಒ, ಎಇಇ ವರ್ಗಾವಣೆ

ವೆಂಕಟೇಶ್ ಜಿ.ಎಚ್
Published 21 ಜುಲೈ 2019, 20:00 IST
Last Updated 21 ಜುಲೈ 2019, 20:00 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಶಾಸಕರಾಗಿರುವ ಬಾದಾಮಿ ಕ್ಷೇತ್ರದಲ್ಲಿ ಅಧಿಕಾರಿಗಳ ಸಾಮೂಹಿಕ ವರ್ಗಾವಣೆ ಆಗಿದೆ.

ಬಾದಾಮಿ ತಹಶೀಲ್ದಾರ್, ಅಲ್ಲಿನ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ (ಇಒ), ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ), ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಹಾಗೂ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ತಹಶೀಲ್ದಾರ್ ಸುಹಾಸ್ ಇಂಗಳೆ ಅವರಿಗೆ ಧಾರವಾಡಕ್ಕೆ ವರ್ಗಾವಣೆ ಆಗಿದೆ. ಇಒ ಭೀಮಪ್ಪ ಲಾಳಿ ಅವರಿಗೆ ಸ್ಥಾನ ತೋರಿಸಿಲ್ಲ. ಬಿಇಒ ಎ.ಎಸ್.ಹತ್ತಳ್ಳಿ, ಸಿಪಿಐ ಕೆ.ಎಸ್.ಹಟ್ಟಿ ಹಾಗೂ ಎಇಇ ಬಿ.ಎಂ.ಪೂಜಾರ ವರ್ಗಾವಣೆಗೊಂಡಿದ್ದಾರೆ. ಬಾದಾಮಿ ನೂತನ ತಹಶೀಲ್ದಾರ್ ಆಗಿ ಮಲ್ಲಿಕಾರ್ಜುನ ಹೆಗ್ಗಣ್ಣವರ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಸಿಪಿಐ ಆಗಿ ರಮೇಶ ಹಾನಾಪುರ, ಬಿಇಒ ಆಗಿ ಅಶೋಕ ಭಜಂತ್ರಿ, ಎಇಇ ಆಗಿ ಎಸ್.ವಿ. ಜಾಡರ ನೇಮಕಗೊಂಡಿದ್ದಾರೆ.

ADVERTISEMENT

ಆಡಳಿತ ಯಂತ್ರ ಕುಂಟುತ್ತಾ ಸಾಗಿರುವುದು ಸ್ವತಃ ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಕ್ಷೇತ್ರದಲ್ಲಿ ಸರ್ಕಾರಿ ಜಮೀನು ಎಷ್ಟು ಇದೆ. ಎಷ್ಟು ಒತ್ತುವರಿ ಆಗಿದೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ನೀಡುವಂತೆ ತಾಲ್ಲೂಕು ಕೇಂದ್ರದಲ್ಲಿ ನಡೆದಿದ್ದ ಮೊದಲ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದರೂ ಅಧಿಕಾರಿಗಳು ಅದನ್ನು ಹಗುರವಾಗಿ ಪರಿಗಣಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ ಕಳೆದ ಕೆಡಿಪಿ ಸಭೆಯಲ್ಲಿ ಬಹಿರಂಗವಾಗಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೆಲಸ ಮಾಡದವರಿಗೆ ನನ್ನ ಕ್ಷೇತ್ರದಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದರು. ಅದೀಗ ಕಾರ್ಯರೂಪಕ್ಕೆ ಬಂದಿದೆ‘ ಎಂದು ಶಾಸಕರ ಆಪ್ತರೊಬ್ಬರು ಹೇಳುತ್ತಾರೆ.

‘ಕ್ಷೇತ್ರದಲ್ಲಿನ ಮರಳು ಮಾಫಿಯಾ, ವ್ಯಾಪಕ ಭ್ರಷ್ಟಾಚಾರ ಅಧಿಕಾರಿಗಳ ಸಾಮೂಹಿಕ ವರ್ಗಾವಣೆಗೆ ಕಾರಣವಾಗಿದೆ. ಅದನ್ನು ಒಪ್ಪಬಹುದು. ಆದರೆ, ಗುಳೇದಗುಡ್ಡ ‘ಶಕ್ತಿ ಕೇಂದ್ರ‘ದ ಕೆಂಗಣ್ಣಿಗೆ ಗುರಿಯಾದ ಕೆಲವರೂ ವರ್ಗಾವಣೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಅದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಸಿದ್ದರಾಮಯ್ಯ ಸಾಹೇಬರು ಆಪ್ತರಿಂದ ಬರುವ ವರ್ಗಾವಣೆ ಶಿಫಾರಸುಗಳ ಹಿಂದಿನ ಮರ್ಮ, ಪೂರ್ವಾಪರ ಅರಿಯಬೇಕು. ಇಲ್ಲದಿದ್ದರೆ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯಲಿದೆ‘ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಾದಾಮಿ ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.