ADVERTISEMENT

ವೀರಶೈವ, ಲಿಂಗಾಯತ ಬೇರೆಯಲ್ಲ: ವೀರಣ್ಣ ಚರಂತಿಮಠ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 9:17 IST
Last Updated 9 ಜುಲೈ 2022, 9:17 IST
ಬಾಗಲಕೋಟೆಯಲ್ಲಿ ಶನಿವಾರ ಆರಂಭವಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಮಟ್ಟದ ಕಾರ್ಯಾಗಾರವನ್ನು ಮಹಾಸಭಾ ಉಪಾಧ್ಯಕ್ಷ ವೀರಣ್ಣ ಚರಂತಿಮಠ ಉದ್ಘಾಟಿಸಿದರು
ಬಾಗಲಕೋಟೆಯಲ್ಲಿ ಶನಿವಾರ ಆರಂಭವಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಮಟ್ಟದ ಕಾರ್ಯಾಗಾರವನ್ನು ಮಹಾಸಭಾ ಉಪಾಧ್ಯಕ್ಷ ವೀರಣ್ಣ ಚರಂತಿಮಠ ಉದ್ಘಾಟಿಸಿದರು   

ಬಾಗಲಕೋಟೆ: ವೀರಶೈವರು, ಲಿಂಗಾಯತರು ಬೇರೆಯಲ್ಲ. ಕೆಲವು ಸ್ವಾಮೀಜಿಗಳು ಪ್ರಚಾರಕ್ಕಾಗಿ ಬೇರೆ ಎನ್ನುತ್ತಿದ್ದಾರೆ. ಅವರದ್ದು ಉದ್ಧಟತನದ ಪರಮಾವಧಿ. ಒಡೆಯುವವರನ್ನು ದೂರವಿಟ್ಟು, ಒಂದು ಎನ್ನುವವರೊಂದಿಗೆ ಹೋಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜು ಸಭಾಭವನದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಒಡೆಯುವುದು ಜಾತಿ, ಒಂದು ಮಾಡುವುದು ಧರ್ಮ ಎಂದರು.

ಪಂಗಡ, ಉಪಪಂಗಡ ಹೆಸರಿನಲ್ಲಿ ಒಡೆದು ಹೋಗಿರುವ ಸಮಾಜ ಕೆಳಸ್ಥಿತಿಯಲ್ಲಿದೆ. ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಲ್ಲಿ ಈಗಾಗಲೇ ಅಲ್ಪಸಂಖ್ಯಾತರಾಗಿದ್ದೇವೆ. ಹೀಗೆ ಮುಂದುವರಿದರೆ ರಾಜಕೀಯದಲ್ಲಿ ಭಾರೀ ಬೆಲೆ ತೆರಬೇಕಾಬಹುದು ಎಂದು ಎಚ್ಚರಿಸಿದರು.

ADVERTISEMENT

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು, ರಾಜ್ಯದ ವೀರಶೈವ ಲಿಂಗಾಯತರು ಬಹಳ ಬುದ್ಧಿವಂತರು. ಅವರನ್ನು ಸರಿಗಟ್ಟುವ ಸಮಾಜ ಇನ್ನೊಂದಿಲ್ಲ. ಅವರು ಮನಸ್ಸು ಮಾಡಿದರೆ ವಿಶ್ವವನ್ನೇ ಆಳಬಲ್ಲರು ಎಂದಿದ್ದರು. ಕುರಿ ಹಿಂಡಿನಲ್ಲಿರುವ ಹುಲಿಂತಾಗಿದ್ದೇವೆ. ಹುಲಿ ಎಂಬುದೇ ಮರೆತು ಹೋಗಿದೆ. ಒಂದಾಗಿ ಮುನ್ನಡೆಯಬೇಕಿದೆ ಎಂದರು.

ಮನೆಗೆ ಮಲ್ಲಿಗೆಯಾಗಬೇಕು. ಎಲ್ಲೆಡೆ ಸುವಾಸನೆ ಬೀರಬೇಕು. ಕಷ್ಟಗಳಿಗೆ ಹೆದರದೆ ಕಲ್ಲಿನಂತೆ ಎದುರಿಸಬೇಕು. ಬಡವರ, ದೀನ–ದಲಿತ– ದುರ್ಬಲರ ಸೇವೆ ಮೂಲಕ ಅವರಿಗೆ ಬೆಲ್ಲವಾಗಬೇಕು ಎಂದು ಹೇಳಿದರು.

ಮಹಸಭಾ ಹಿರಿಯ ಉಪಾಧ್ಯಕ್ಷ ಎನ್‌. ತಿಪ್ಪಣ್ಣ ಮಾತನಾಡಿ, ವೀರಶೈವ, ಲಿಂಗಾಯತ ಬೇರೆ ಎನ್ನುವುದು ಸುಳ್ಳು. ಮಹಸಭಾ ಎಲ್ಲರೂ ಒಂದೇ ಎಂದು ಒಪ್ಪಿಕೊಂಡಿದೆ ಎಂದರು.

104 ಒಳಪಂಗಡಗಳಿವೆ. ಭಾಷೆ, ಆಚರಣೆ ಬೇರೆಯಾಗಬಾರದು. ನಾನು, ನೀವು ಬೇರೆ ಎಂದರೆ ಉಳಿಯುವುದಿಲ್ಲ. ಒಳಪಂಗಡಗಳನ್ನು ಬಿಟ್ಟು ಒಂದಾಗಬೇಕು. ಯಾರೂ, ಯಾವ ಧರ್ಮವನ್ನು ದ್ವೇಷ ಮಾಡಬಾರದು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಗುಳೇದಗುಡ್ಡದ ಮುರುಘಾಮಠದ ಕಾಶಿನಾಥ ಸ್ವಾಮೀಜಿ ಮಾತನಾಡಿ, ಈ ಧರ್ಮವು ವ್ಯಕ್ತಿನಿಷ್ಠ ಧರ್ಮವಲ್ಲ. ತತ್ವನಿಷ್ಠ ಧರ್ಮವಾಗಿದೆ. ಎಲ್ಲರಿಗೆ ಧರ್ಮದ ಬಗ್ಗೆ ಗೊತ್ತಿದೆ. ಆದರೆ, ಪಾಲನೆ ಮಾಡುತ್ತಿಲ್ಲ ಎಂದರು.

ಮಹಾಸಭಾ ಉಪಾಧ್ಯಕ್ಷ ಎಚ್‌.ಎಂ. ಚಂದ್ರಶೇಖರಪ್ಪ, ಕೋಶಾಧ್ಯಕ್ಷ ವರುಣಾ ಮಹೇಶ, ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.