
ಬಾಗಲಕೋಟೆ: ಉಪಚುನಾವಣೆಗೆ ಸಿದ್ಧಗೊಳ್ಳಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ ಮಾಡಿದ ಬಾಗಲಕೋಟೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ನೇಮಕ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಅದೇ ನೀಡಿದ್ದರೂ ಆಯ್ಕೆಯಾದ ವ್ಯಕ್ತಿ ಬಗ್ಗೆ ಪಕ್ಷದಲ್ಲಿರುವ ಕೆಲವು ಮುಸ್ಲಿಂ ಮುಖಂಡರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಅನ್ಯಾಯವನ್ನು ಸರಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ನೇಮಕಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂಬರುವ ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಲೆ ತೆರಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಮೂವರು ಮುಖಂಡರು ಅರ್ಜಿ ಸಲ್ಲಿಸಿದ್ದರು. ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸಮುದಾಯದ ಮುಖಂಡರು, ಪಕ್ಷದ ಹಿರಿಯರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಭರವಸೆ ನೀಡಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಬರ್ ಮುಲ್ಲಾ ಅವರನ್ನು ದಿಢೀರ್ ಆಗಿ ನೇಮಕಮಾಡಲಾಗಿದೆ. ಅವರು ಮುದ್ದೇಬಿಹಾಳ ತಾಲ್ಲೂಕು ಮೂಲದವರಾಗಿದ್ದಾರೆ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಎ.ಡಿ. ಮೊಕಾಶಿ, ಅಜರುದ್ದೀನ್, ಅಯ್ಯೂಬ್ ಖಾನ್ ಬಾಗೇವಾಡಿ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.
‘ನಾನೂ ಇಲ್ಲಿಯವನೇ. 25 ವರ್ಷಗಳಿಂದ ಇಲ್ಲಿ ಪಕ್ಷದ ಕಾರ್ಯಕರ್ತನಾಗಿದ್ದೇನೆ. ಕೆಲವರು ಗಿಮಿಕ್‌ಗಾಗಿ ವಿರೋಧ ಮಾಡುತ್ತಿದ್ದಾರೆ. ಜಿಲ್ಲಾಧ್ಯಕ್ಷರಿಗೆ ಈ ಕುರಿತು ಮನವಿ ನೀಡಲಾಗುವುದು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಮುಲ್ಲಾ ಹೇಳಿದರು.
‘ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯಲ್ಲಿ ಸ್ಥಳೀಯ ಶಾಸಕರಿಗೆ ಮಾನ್ಯತೆ ನೀಡಲಾಗುತ್ತದೆ. ಶಾಸಕರಾಗಿದ್ದ ಎಚ್.ವೈ. ಮೇಟಿ ಅವರು ಮರಣ ಹೊಂದುವ ಮುನ್ನ ಪತ್ರ ನೀಡಿದ್ದರು. ಅದನ್ನೇ ಪಕ್ಷದ ರಾಜ್ಯ ಮುಖಂಡರು ಪರಿಗಣಿಸಿ ನೇಮಕ ಮಾಡಿದ್ದಾರೆ’ ಎಂದು ಎಸ್.ಜಿ. ನಂಜಯ್ಯನಮಠ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.