- ಐಸ್ಟಾಕ್ ಚಿತ್ರ
ಬಾಗಲಕೋಟೆ: ಶಾಸಕರಾಗಿದ್ದ ಎಚ್.ವೈ. ಮೇಟಿ ಅವರ ನಿಧನದಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲು ಇನ್ನೂ ಸಮಯವಿದೆ. ಆದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಒಂದೆಡೆ ಎಚ್.ವೈ. ಮೇಟಿ ಅವರ ಕುಟುಂಬದ ಬೆಂಬಲಿಗರು ಉಮೇಶ ಮೇಟಿ ಅವರ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು ಪ್ರಚಾರ ಆರಂಭಿಸಿದ್ದಾರೆ. ಇನ್ನೊಂದೆಡೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಬೆಂಬಲಿಗರೂ ಅವರ ಫೋಟೊ ಹಾಕಿ ಪ್ರಚಾರದಲ್ಲಿ ತೊಡಗಿದ್ದಾರೆ.
ಫೇಸ್‌ಬುಕ್‌ನಲ್ಲಿ ‘ಭಾವಿ ಶಾಸಕರು ಉಮೇಶ ಮೇಟಿ’ ಎಂಬ ಖಾತೆ ತೆರೆಯಲಾಗಿದ್ದು, ಉಮೇಶ ಮೇಟಿ ಹಾಗೂ ದಿ. ಎಚ್.ವೈ. ಮೇಟಿ ಅವರ ಭಾವಚಿತ್ರ ಹಾಕಲಾಗಿದೆ. ಹಿಂಬದಿಯಲ್ಲಿ ವಿಧಾನಸೌಧದ ಚಿತ್ರ ಹಾಕಲಾಗಿದೆ.
2008 ರಿಂದ 2023ರ ನಡುವೆ ನಡೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಎಚ್.ವೈ. ಮೇಟಿ ಹಾಗೂ ವೀರಣ್ಣ ಚರಂತಿಮಠ ಅವರೇ ಪ್ರಮುಖ ಎದುರಾಳಿಗಳಾಗಿದ್ದರು. ಕಾಂಗ್ರೆಸ್‌ನಿಂದ ಮೇಟಿ ಅವರು ಕಣಕ್ಕಿಳಿದರೆ, ಬಿಜೆಪಿಯಿಂದ ಚರಂತಿಮಠ ಅವರು ಕಣಕ್ಕಿಳಿದಿದ್ದರು. ಇಬ್ಬರೂ ತಲಾ ಎರಡು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್‌ನಿಂದ ಮೇಟಿ ಅವರ ಕುಟುಂಬದ ಸದಸ್ಯರೊಬ್ಬರು ಸ್ಪರ್ಧಿಸುತ್ತಾರೆ ಎಂಬ ಮಾತು ಪಕ್ಷದ ವಲಯದಲ್ಲಿದೆ. ಉಪಚುನಾವಣೆ ನಡೆದಾಗ ಮೃತರಾದವರ ಕುಟುಂಬದವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ತೆರೆಮರೆಯಲ್ಲಿ ಕೆಲವರು ಹೆಸರು ಕೇಳಿ ಬರುತ್ತಿವೆಯಾದರೂ ಟಿಕೆಟ್ ದೊರೆಯುವ ಲಕ್ಷಣಗಳು ಕಾಣಿಸುತ್ತಿಲ್ಲ.
ಮೇಟಿ ಅವರ ಪುತ್ರರಾದ ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ ಅವರ ಹೆಸರು ಚಾಲ್ತಿಯಲ್ಲಿವೆ. ಪಕ್ಷದ ಮುಖಂಡರು, ಬೆಂಬಲಿಗರಲ್ಲಿ ಇಬ್ಬರೂ ಹೆಸರೂ ಕೇಳಿ ಬರುತ್ತಿವೆ. ಎಚ್.ವೈ. ಮೇಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಜತೆಗೆ ಸಿಎಂ ಅವರ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಟಿಕೆಟ್ ಹಂಚಿಕೆ ವಿಷಯದಲ್ಲಿ ಅವರ ಮಾತೇ ಅಂತಿಮವಾಗುವ ಸಾಧ್ಯತೆಗಳು ಹೆಚ್ಚಿವೆ.
ಎಚ್.ವೈ. ಮೇಟಿ ಅವರ ಪುತ್ರರಿಬ್ಬರೂ ರಾಜಕೀಯ ಬೆಳವಣಿಗೆ, ಚುನಾವಣಾ ತಂತ್ರಗಳನ್ನು ನೋಡಿಕೊಂಡೇ ಬೆಳೆದಿರುವರಾದರೂ ಚುನಾವಣಾ ಕಣಕ್ಕೆ ಹೊಸಬರಾಗಿದ್ದಾರೆ. ವರ್ಚಸ್ಸಿನ ಕೊರತೆಯೂ ಕಾಣುತ್ತಿದೆ.
ಬಿಜೆಪಿಯಲ್ಲಿ ಮಾಜಿ ಶಾಸಕ ವೀರಣ್ಣ ಮೇಟಿ ಅವರಿಗೇ ಟಿಕೆಟ್ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಬೇರೆಯವರಿಗೆ ಅವಕಾಶ ದೊರೆಯುವ ಸಾಧ್ಯತೆ ಬಹಳ ಕಡಿಮೆ. ಆದರೆ, ಬಿಜೆಪಿ ಪಕ್ಷದೊಳಗಿನ ಭಿನ್ನಮತ ಇನ್ನೂ ಪೂರ್ಣವಾಗಿ ಶಮನವಾಗದಿರುವುದು ಪಕ್ಷದ ಅಭ್ಯರ್ಥಿಗೆ ತಲೆನೋವಾಗಬಹುದು. ಒಟ್ಟಿನಲ್ಲಿ ಉಪಚುನಾವಣಾ ಕಣ ರಂಗೇರಲಿದೆ.
ಪಕ್ಷದ ವೇದಿಕೆಯಲ್ಲಿ ಇನ್ನೂ ಉಪಚುನಾವಣೆ ಬಗ್ಗೆ ಚರ್ಚೆಯಾಗಿಲ್ಲ. ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸುವುದು ಸಹಜ.– ಶಾಂತಗೌಡ ಪಾಟೀಲ, ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ
ಪಕ್ಷದ ಹೈಕಮಾಂಡ್ ಹಾಗೂ ರಾಜ್ಯದ ನಾಯಕರು ನಿರ್ಧಾರ ಮಾಡುತ್ತಾರೆ. ಇಲ್ಲಿಯವರೆಗೆ ಯಾವುದೇ ಚರ್ಚೆಗಳಾಗಿಲ್ಲ.– ಎಸ್.ಜಿ. ನಂಜಯ್ಯನಮಠ, ಅಧ್ಯಕ್ಷ ಕಾಂಗ್ರೆಸ್ ಜಿಲ್ಲಾ ಘಟಕ