ADVERTISEMENT

ಬಾಗಲಕೋಟೆ | ಕಾಮಗಾರಿ ಅರ್ಧಕ್ಕೆ ನಿಲ್ಲಿಸಬೇಡಿ: ಸಿಇಒ ಮೊಹಸಿನ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 3:15 IST
Last Updated 18 ಸೆಪ್ಟೆಂಬರ್ 2025, 3:15 IST
ಬಾಗಲಕೋಟೆಯಲ್ಲಿ ಬುಧವಾರ ನಡೆದ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಮಹಮ್ಮದ್ ಮೊಹಸಿನ್ ಮಾತನಾಡಿದರು
ಬಾಗಲಕೋಟೆಯಲ್ಲಿ ಬುಧವಾರ ನಡೆದ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಮಹಮ್ಮದ್ ಮೊಹಸಿನ್ ಮಾತನಾಡಿದರು   

ಬಾಗಲಕೋಟೆ: ವಿವಿಧ ಇಲಾಖೆಗಳಡಿ ಕೈಗೊಂಡ ಕಟ್ಟಡ ಕಾಮಗಾರಿಗಳಿಗೆ ವಿಳಂಬ ನೀತಿ ಅನುಸರಿಸದೇ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಮಹಮ್ಮದ್ ಮೊಹಸಿನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜರುಗಿದ ದ್ವಿತೀಯ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಮಗಾರಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮುಂದಿನ ಕಂತಿನ ಅನುದಾನ ಬಿಡುಗಡೆಯಾಗುವವರೆಗೆ ಕಾಮಗಾರಿ ಅಷ್ಟಕ್ಕೇ ಬಿಡುವಂತಿಲ್ಲ. ಪೂರ್ಣಗೊಳಿಸಬೇಕು ಎಂದು ನಿರ್ಮಿತಿ ಹಾಗೂ ಕೆಐಆರ್‌ಡಿಎಲ್‌ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ಎಆರ್‌ಟಿ ಔಷಧ ಲಭ್ಯವಿರಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಅನಾವಶ್ಯಕವಾಗಿ ಸಿಜೇರಿಯನ್ ಹೆರಿಗೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿ ಇಲ್ಲವೇ ನೋಂದಣಿ ರದ್ದುಪಡಿಸಿ ಎಂದು ತಿಳಿಸಿದರು.

ADVERTISEMENT

ನವನಗರ, ಇಳಕಲ್ ಹಾಗೂ ಜಮಖಂಡಿಯಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭಿಸಲು ಬಾಡಿಗೆ ಕಟ್ಟಡ ಗುರುತಿಸಿ, ಆರಂಭಿಸಬೇಕು. ಆಹಾರ ಸುರಕ್ಷತೆಗೆ ಎಸ್.ಎಸ್.ಐ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದರು.

ಕಳೆದ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ 69 ಮಕ್ಕಳನ್ನು ಹುಡುಕಿ ಶಾಲೆಗೆ ದಾಖಲು ಮಾಡಲು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿಸಬೇಕು ಎಂದು ಹೇಳಿದರು.

ಬಾದಾಮಿ ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು 4.92 ಹೆಕ್ಟೇರ್‌ ಜಾಗ ಪಡೆಯಲು ಅರಣ್ಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಪರಿಶೀಲನೆಯಲ್ಲಿದೆ ಎಂದು ಅಧಿಕಾರಿ ಗುರುಪಾದ ಡೂಗನವರ ತಿಳಿಸಿದರು.

ಹೊಸ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ 90, ನಗರ ಪ್ರದೇಶದಲ್ಲಿ 78 ನಿವೇಶನ ಹಾಗೂ ಸಿಎ ನಿವೇಶನಗಳ ಪಟ್ಟಿಯನ್ನು ಪ್ರಧಾನ ಕಚೇರಿಗೆ ಸಲ್ಲಿಸಿದ್ದೀರಿ. ಆದರೆ, ನಿವೇಶನ ಖರೀದಿಗೆ ತಗಲುವ ಅನುದಾನ ಮಂಜೂರಾತಿಗೆ ಕ್ರಮಕೈಗೊಳ್ಳಬೇಕು ಎಂದರು.

ಕೌಟುಂಬಿಕ ದೌರ್ಜನ್ಯದಡಿ 101 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 25 ಮಾತ್ರ ಇತ್ಯರ್ಥಗೊಂಡಿವೆ. ವಿಚಾರಣಾ ಹಂತದಲ್ಲಿರುವ 72 ಪ್ರಕರಣಗಳು ಬಾಕಿ ಉಳಿದಿವೆ. ಕೌಟುಂಬಿಕ ದೌರ್ಜನ್ಯ ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಂದ ಜಂಟಿ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಅಂದಾಜು 27 ಸಾವಿರ ಹೆಕ್ಟೆರ್ ಪ್ರದೇಶ ಹಾನಿಯಾಗಿದೆ. ಶೇ86 ರಷ್ಟು ಸಮೀಕ್ಷೆಯಾಗಿದೆ. ಸಮೀಕ್ಷೆ ಪೂರ್ಣಗೊಂಡ ನಂತರ ಪರಿಹಾರದ ಪೋರ್ಟಲ್‍ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.