
ಬಾಗಲಕೋಟೆ: ‘ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಶನಿವಾರ ಪ್ರಕಟಿಸಲಾಗಿದ್ದು, 1,26,233 ಪುರುಷ ಹಾಗೂ 1,31,863 ಮಹಿಳಾ ಮತದಾರರು ಸೇರಿ 2,58,118 ಮತದಾರರಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಮುಂಬರುವ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದ ಅಂತಿಮ ಮತದಾರರ ಪಟ್ಟಿಯನ್ನು ವಿವಿಧ ರಾಜಕೀಯ ಪ್ರತಿನಿಧಿಗಳಿಗೆ ವಿತರಿಸಿ ಮಾತನಾಡಿದರು.
‘391 ಸೇವಾ ಮತದಾರರು, 3,538 ಯುವ ಮತದಾರರು, 2,582 ಅಂಗವಿಕಲ ಮತದಾರರು, 3,089 ಮಂದಿ 85ಕ್ಕಿಂತ ಹೆಚ್ಚಿನ ವಯಸ್ಸಿನ ಮತದಾರರು, 22 ಇತರೆ ಮತದಾರರಿದ್ದಾರೆ’ ಎಂದು ತಿಳಿಸಿದರು.
‘ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ 3,915 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದು, 1,300 ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ. ಈ ಪೈಕಿ 543 ಮೃತಪಟ್ಟವರು, 413 ವರ್ಗಾವಣೆಯಾದವರು ಹಾಗೂ 344 ಪುನರಾವರ್ತನೆಗೊಂಡ ಮತದಾರರಿದ್ದಾರೆ’ ಎಂದರು.
‘ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಚುನಾವಣೆ ಘೋಷಣೆಯಾದ ದಿನಾಂಕದಿಂದ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕದ 10 ದಿನ ಮುಂಚಿತವಾಗಿ ಸ್ವೀಕೃತಗೊಂಡ ಅರ್ಜಿಗಳನ್ನು ವಿಲೇವಾರಿ ಮಾಡಲು ಅವಕಾಶವಿದೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಅಧಿಸೂಚಿತ ಮತದಾರರ ನೋಂದಣಿ ಅಧಿಕಾರಿ, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಿಗೆ ನಿಗದಿತ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ’ ಎಂದು ತಿಳಿಸಿದರು.
‘ಅರ್ಹ ಮತದಾರರು ತಮ್ಮ ಮೊಬೈಲ್ ಫೋನ್‌ನಲ್ಲಿ Voter Helpline ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಇಲ್ಲವೇ http://voters.eci.gov.in/ ಮೂಲಕ ಸರಿಯಾದ ವಿವರ ಹಾಗೂ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ಪಟ್ಟಿ, ಮತದಾರರ ಗುರುತಿನ ಚೀಟಿ ಹಾಗೂ ಅರ್ಜಿಗಳ ಸಲ್ಲಿಕೆಗೆ ಸಂಬಂಧಿಸಿದ ಮಾಹಿತಿಗೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ’ ಎಂದರು.
ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ್ ವಾಸುದೇವ ಸ್ವಾಮಿ, ಚುನಾವಣಾ ವಿಭಾಗದ ಅಧಿಕಾರಿ ಮಹೇಶ ಪಾಂಡವ, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಶ್ರೀನಿವಾಸ ಬಳ್ಳಾರಿ, ನಾಗರಾಜ ಹದ್ಲಿ, ಬಸವರಾಜ ಹುನಗುಂದ, ಜಯಂತ ಕುರಂದವಾಡ, ಯಮನಪ್ಪ ಶಿರೂರ, ಭೀಮಪ್ಪ, ಪ್ರಭುರಾಜ ಪಾಟೀಲ ಇದ್ದರು.
‘ಜಿಲ್ಲಾಧಿಕಾರಿ ಕಚೇರಿ ಮತದಾರರ ನೋಂದಣಿ ಅಧಿಕಾರಿ (ಉಪವಿಭಾಗಾಧಿಕಾರಿ)ಕಚೇರಿ ಸಹಾಯಕ ಮತದಾರರ ನೋಂದಣಿ ಅಧಿಕಾರಿ (ತಹಶೀಲ್ದಾರ್) ಕಚೇರಿ ಹಾಗೂ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಎಲ್ಲ ಮತಗಟ್ಟೆಗಳಲ್ಲಿ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್‍ಸೈಟ್ http://ceo.karnataka.gov.in/enನಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ವಿವರಗಳು ಸರಿಯಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.