ಬಾಗಲಕೋಟೆ: ‘ಹಣದ ಆಸೆಗೆ ಒಳಗಾಗದೇ ಪ್ರಕರಣ ನ್ಯಾಯಯುತವಾಗದ್ದರೆ ಮಾತ್ರ ಪ್ರಕರಣ ಕೈಗೆತ್ತಿಕೊಂಡು ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಅಶೋಕ ಹಿಂಚಿಗೇರಿ ಹೇಳಿದರು.
ಬಿ.ವಿ.ವಿ. ಸಂಘದ ಎಸ್.ಸಿ. ನಂದಿಮಠ ಕಾನೂನು ಕಾಲೇಜು ಮತ್ತು ಜಿ.ಎಚ್.ಛಬ್ಬಿ ಅಸೋಸಿಯೇಟ್ಸ್ ಸಹಯೋಗದಲ್ಲಿ ಶನಿವಾರ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಗ್ಯಾಲರಿ ಹಾಲ್‍ನಲ್ಲಿ ಶನಿವಾರ ನಡೆದ ದಿ. ಜಿ.ಎಚ್.ಛಬ್ಬಿ ಸಂಸ್ಮರಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ವಕೀಲರ ಪ್ರಾಮಾಣಿಕತೆಯು ಕಕ್ಷಿದಾರರಿಗೆ ನ್ಯಾಯ ಒದಗಿಸುತ್ತದೆ. ನ್ಯಾಯಾಧೀಶರು ಕರ್ತವ್ಯದ ಸಮಯದಲ್ಲಿ ತಮ್ಮ ಪೂರ್ವಾಶ್ರಮದಿಂದ ಮುಕ್ತರಾಗಿರಬೇಕು’ ಎಂದರು.
‘ಶಿಕ್ಷಕರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಶಿಲ್ಪಿಗಳಾಗಿದ್ದಾರೆ. ಯುವ ಸಮೂಹಕ್ಕೆ ತಂದೆ–ತಾಯಿ, ಗುರು, ಅತಿಥಿ ದೇವೋಭವದ ಪರಿಕಲ್ಪನೆಯ ಅರಿವು ಮೂಡಿಸುವುದು ಅಗತ್ಯವಾಗಿದೆ’ ಎಂದು ಹೇಳಿದರು.
‘ಛಬ್ಬಿ ಅವರು ಆದ್ಯಾತ್ಮ ಜೀವಿಯಾಗಿ, ಆತ್ಮವನ್ನು ವಿಕಸನಗೊಳಿಸಿಕೊಂಡು ದೈವಿ ಸ್ವರೂಪಿಯಾಗಿ ಪರಿಪೂರ್ಣತೆಯ ಸಂಕೇತವಾಗಿದ್ದರು. ಅಪಾರವಾದ ಜ್ಞಾನದ ಮೂಲಕ ಕಕ್ಷಿದಾರರಿಗೆ ನ್ಯಾಯ ಒದಗಿಸುತ್ತಿದ್ದರು’ ಎಂದರು.
ಮಖ್ಯ ಅತಿಥಿಯಾಗಿದ್ದ ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ. ವಿಜಯ ಮಾತನಾಡಿ, ‘ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ನ್ಯಾಯಾಲಯಗಳು ಅಭಿವೃದ್ಧಿಯಾಗುತ್ತಿದ್ದು, ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಅವರ ಪ್ರಯತ್ನವೂ ಕಾರಣವಾಗಿದೆ’ ಎಂದು ಹೇಳಿದರು.
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಅಧ್ಯಕ್ಷ, ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ, ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಉಪಸ್ಥಿತರಿದ್ದರು.
ಐಶ್ವರ್ಯ ಲಿಂಗದ ಪ್ರಾರ್ಥಿಸಿದರು, ಕಾನೂನು ಕಾಲೇಜಿನ ಪ್ರಾಚಾರ್ಯರಾದ ಎಂ.ಪಿ. ಚಂದ್ರಿಕಾ ಸ್ವಾಗತಿಸಿದರು, ಶಭಾನಾತಾಜ ನಿಡಗುಂದಿ ಪರಿಚಯಿಸಿದರು. ಆರ್.ಎಸ್.ಕುಂಬಾರ ವಂದಿಸಿದರು, ಸುನೀಲ ಕಿರಸೂರ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಜಿ.ಎಚ್.ಛಬ್ಬಿ ಅಸೋಸಿಯೇಟ್ಸ್ ವತಿಯಿಂದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಪ್ರಭಾವತಿ ಹಿರೇಮಠ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ ಅವರನ್ನು ಸನ್ಮಾನಿಸಲಾಯಿತು. ಎಲ್.ಎಲ್.ಬಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಿವಿಲ್ ಪ್ರಕ್ರಿಯಾ ಸಂಹಿತೆ ಪುಸ್ತಕಗಳನ್ನು ವಿತರಿಸಲಾಯಿತು.
ನಂತರ ನಡೆದ ಗೋಷ್ಠಿಯಲ್ಲಿ ‘ಪುನರ್‌ವಸತಿ ಮತ್ತು ಪುನರ್‌ವ್ಯವಸ್ಥೆ ಕಾಯ್ದೆ 2013ರಡಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು’ ಕುರಿತು ಜಿಲ್ಲಾ ನ್ಯಾಯಾಧೀಶ ಸುನೀಲ ಶೆಟ್ಟರ ಉಪನ್ಯಾಸ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಫೈರೋಜಾ ಉಕ್ಕಲಿ, ಹಿರಿಯ ವಕೀಲ ಕೆ.ಜಿ.ಪುರಾಣಿಕಮಠ ಉಪಸ್ಥಿತರಿದ್ದರು.
ಮಹನೀಯರ ಸೇವೆ ಸ್ಮರಿಸಿಕೊಳ್ಳಿ
‘ದೇಶಕ್ಕೆ ಸಮಾಜಕ್ಕೆ ಮಹೋನ್ನತ ಸೇವೆ ಸಲ್ಲಿಸಿದ ಮಹನಿಯರನ್ನು ಸ್ಮರಿಸಿಕೊಳ್ಳದಿದ್ದರೆ ಅಂಥ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಹೇಳಿದರು.
‘ಇಂದಿನ ಯುವ ಜನಾಂಗಕ್ಕೆ ನಮ್ಮ ಇತಿಹಾಸದ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು ಅಗತ್ಯವಾಗಿದೆ. ಮನಸ್ಸು ಮನಸ್ಸುಗಳನ್ನು ಒಂದುಗೂಡಿಸುವ ಮೂಲ ಸಂವಿಧಾನದಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ರಾಮಾಯಣ ಮತ್ತು ಮಹಾಭಾರತದ ಉಲ್ಲೇಖವಿದ್ದು ಭಾರತವನ್ನು ಸಾಂಸ್ಕೃತಿಕ ರಾಷ್ಟ್ರವನ್ನಾಗಿ ಕಟ್ಟುವುದು ಸಂವಿಧಾನದ ಉದ್ದೇಶವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.