
ಸಾಂದರ್ಭಿಕ ಚಿತ್ರ
(ಎ.ಐ ಚಿತ್ರ)
ಬಾಗಲಕೋಟೆ: ನಗರದ ಮೊರಾರ್ಜಿ ಸರ್ಕಾರಿ ವಸತಿ ನಿಲಯದಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿನಿಯರನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿಸಿದ್ದಾರೆ.
ಗುರುವಾರ ಸಂಜೆ ವಸತಿ ನಿಲಯದಲ್ಲಿದ್ದ 10ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ವಾರ್ಡನ್‌ಗೆ ತಿಳಿಸದೇ ವಸತಿ ನಿಲಯದಿಂದ ನಾಪತ್ತೆಯಾಗಿದ್ದರು. ಅಧ್ಯಯನದ ವೇಳೆ ಹಾಜರಾತಿ ತೆಗೆದುಕೊಳ್ಳುವಾಗ ವಿದ್ಯಾರ್ಥಿನಿಯರು ಇಲ್ಲದಿರುವುದು ಬೆಳಕಿಗೆ ಬಂದಿತ್ತು.
ಸುತ್ತ ಮುತ್ತಲಿನ ಪ್ರದೇಶದಲ್ಲಿ ಶೋಧ ನಡೆಸಿದ್ದ ವಸತಿ ನಿಲಯದ ಸಿಬ್ಬಂದಿ, ಪೋಷಕರಿಗೆ ಮಾಹಿತಿ ನೀಡಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಗೆ ಬಂದು ದೂರು ನೀಡಲಾಗಿತ್ತು.
ದೂರು ಸ್ವೀಕರಿಸಿದ ಬಳಿಕ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಶಾಲಾ ಶಿಕ್ಷಕರು ಹಾಗೂ ಇಬ್ಬರು ವಿದ್ಯಾರ್ಥಿನಿಯರಿಂದ ಮಾಹಿತಿ ಸಂಗ್ರಹಿಸಿದರು. ನಾಲ್ವರು ವಿದ್ಯಾರ್ಥಿನಿಯರು ನವನಗರ ಬಸ್ ನಿಲ್ದಾಣದಿಂದ ಹುನಗುಂದ ಕಡೆಗೆ ಹೋಗುವ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ ಎಂದು ತಿಳಿದು ಬಂದಿತ್ತು.
ತಕ್ಷಣವೇ ಹುನಗುಂದ ಮತ್ತು ಇಳಕಲ್ ಪೊಲೀಸ್ ಠಾಣೆಗಳಿಗೆ ತಿಳಿಸಲಾಗಿತ್ತು. ಎರಡೂ ಬಸ್ ನಿಲ್ದಾಣಗಳಲ್ಲಿ ತಪಾಸಣೆ ಮಾಡಿದಾಗ ವಿದ್ಯಾರ್ಥಿನಿಯರು ಪತ್ತೆಯಾಗಲಿಲ್ಲ.
ನಾಲ್ವರು ವಿದ್ಯಾರ್ಥಿನಿಯರ ಪೈಕಿ ಒಬ್ಬ ವಿದ್ಯಾರ್ಥಿನಿ ಬಳಿ ಮೊಬೈಲ್ ಇತ್ತು. ಆ ಮೊಬೈಲ್‌ನ ತಾಂತ್ರಿಕ ಮಾಹಿತಿ ಆಧಾರದ ಮೇಲೆ ಅವರು ವಿಜಯಪುರಜಿಲ್ಲೆಯ ಬಾಗೇವಾಡಿ ತಾಲ್ಲೂಕಿನ ಮಣಗುಳಿ ಕಡೆಗೆ ತೆರಳಿರುವುದು ಗೊತ್ತಾಯಿತು.
ಕೂಡಲೇ ವಿಜಯಪುರ ನಗರ ಪೊಲೀಸ್ ಠಾಣೆಯ ಗಾಂಧಿಚೌಕ್ ಠಾಣೆ ಎಸ್‌ಎಚ್‌ಒ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಯಿತು. ವಿಜಯಪುರ ಬಸ್ ನಿಲ್ದಾಣ ಹೊರಪೋಸ್ಟ್ ಸಿಬ್ಬಂದಿ ಸಹಕಾರದಿಂದ ಎಲ್ಲಾ ಬಸ್ ನಿಲ್ದಾಣಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಲಾಯಿತು.
ರಾತ್ರಿ 12:15ರ ಸುಮಾರಿಗೆ ನಾಲ್ವರು ವಿದ್ಯಾರ್ಥಿನಿಯರು ವಿಜಯಪುರ ಬಸ್ ನಿಲ್ದಾಣದ ಹೊರಭಾಗದಲ್ಲಿರುವ ಟಿಪ್ಪು ವೃತ್ತದ ಬಳಿ ಪತ್ತೆಯಾದರು. ಬೆಳಿಗ್ಗೆ ಅವರನ್ನು ಬಾಗಲಕೋಟೆಗೆ ಕರೆದುಕೊಂಡು ಬಂದು ಪೋಷಕರಿಗೆ ಒಪ್ಪಿಸಲಾಗಿದೆ.
ನಾಪತ್ತೆಯಾದ ಬಾಲಕಿಯರನ್ನು ಪತ್ತೆಹಚ್ಚುವಲ್ಲಿ ವಿಜಯಪುರ ನಗರ ಪೊಲೀಸರು, ಗಾಂಧಿಚೌಕ್ ಪೊಲೀಸ್ ಠಾಣೆ ಸಿಬ್ಬಂದಿ, ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸಿ.ಬಿ. ಚಿಕ್ಕೋಡಿ ನೇತೃತ್ದ ತ್ವರಿತ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠ ಸಿದ್ದಾರ್ಥ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಮೊಬೈಲ್ ಫೋನ್ ಬಳಕೆಗೆ ನಿರ್ಬಂಧ ವಿಧಿಸಿರುವುದು ಸೇರಿದಂತೆ ಯಾವ ಕಾರಣಕ್ಕೆ ವಿದ್ಯಾರ್ಥಿನಿಯರು ನಿಲಯದಿಂದ ಹೊರಕ್ಕೆ ಹೋಗಿದ್ದರು ಎಂಬುದನ್ನು ವಿಚಾರಣೆ ಮಾಡಲಾಗುತ್ತಿದೆ’ ಎಂದು ಎಸ್ಪಿ ಗೋಯಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.