ಬಾಗಲಕೋಟೆ: ಸ್ವಚ್ಛತೆ ಬಗ್ಗೆ ಅಧ್ಯಯನ ಮಾಡಲು ಬಾಗಲಕೋಟೆ ನಗರಸಭೆ ಸದಸ್ಯರು ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್‌ಗೆ ತೆರಳಿದ್ದರು. ಅವರ ಅವಧಿ ಇನ್ನೂ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿರುವುದರಿಂದ ಅಧ್ಯಯನ ಪ್ರವಾಸಕ್ಕೆ ಮಾಡಲಾಗಿದ್ದ ₹13.65 ಲಕ್ಷ ವೆಚ್ಚ ವ್ಯರ್ಥವಾಯಿತಾ ಎನ್ನುವ ಚರ್ಚೆ ನಡೆದಿದೆ.
ಅ.28ಕ್ಕೆ ನಗರಸಭೆಯ ಈಗಿನ ಆಡಳಿತ ಮಂಡಳಿಯ ಅವಧಿ ಪೂರ್ಣಗೊಳ್ಳಲಿದೆ. ಸ್ವಚ್ಛ ನಗರದ ವೀಕ್ಷಣೆ ಮಾಡಿ ಬಂದ ಸದಸ್ಯರಿಗೆ ಅದನ್ನು ಅಳವಡಿಸಿಕೊಳ್ಳಲು ಅವಕಾಶವೇ ಇಲ್ಲದಂತಾಗಿದೆ. ಅದಕ್ಕೇ ಸದಸ್ಯರು ಉತ್ಸಾಹ ತೋರದಿರುವುದು ಅನುದಾನ ವೆಚ್ಚದ ಲಾಭ ಸಾರ್ವಜನಿಕರಿಗೆ ದೊರೆಯುವ ಸಾಧ್ಯತೆಗಳು ಇಲ್ಲವಾಗಿವೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಗರಸಭೆ ಸದಸ್ಯರು ಸೇರಿದಂತೆ 37 ಜನರು ವಿಮಾನದಲ್ಲಿ ಇಂದೋರ್‌ಗೆ ಪ್ರಯಾಣ ಬೆಳೆಸಿದ್ದರು. ಅಧ್ಯಯನವನ್ನೂ ಮಾಡಿ ಬಂದಿದ್ದಾರೆ. ಆದರೆ, ಅಧ್ಯಯನ ಕುರಿತು ಯಾವುದೇ ವರದಿ ಸಲ್ಲಿಸಿಲ್ಲ. ಅದರ ಬಗ್ಗೆ ಇತ್ತೀಚೆಗೆ ನಡೆದ ಸಾಮಾನ್ಯಸಭೆಯಲ್ಲಿಯೂ ಚರ್ಚೆ ನಡೆಸಿಲ್ಲ.
ಇಬ್ಬರು ಅಧಿಕಾರಿಗಳನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ನಗರಸಭೆ ಸದಸ್ಯರಿದ್ದರು. ಅವರೆಲ್ಲರೂ ಅಲ್ಲಿನ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದ್ದಲ್ಲದೇ, ಸ್ವಚ್ಛತೆ ನಿರ್ವಹಣೆ, ತ್ಯಾಜ್ಯ ಘಟಕ, ತ್ಯಾಜ್ಯ ನಿರ್ವಹಣೆ, ಜನರ ಸ್ಪಂದನೆ ಎಲ್ಲವನ್ನೂ ತಿಳಿದುಕೊಂಡು ಬಂದಿದ್ದಾರೆ. ಆದರೆ, ಆ ವಿಷಯವನ್ನು ಇಲ್ಲಿನ ಅಧಿಕಾರಿಗಳಿಗೆ ತಿಳಿಸುವ ನಿಟ್ಟಿನಲ್ಲಿ ವರದಿ ಸಲ್ಲಿಸಿದ್ದರೆ, ಮುಂದಿನ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಅನುಕೂಲವಾಗುತ್ತಿತ್ತು. ಆದರೆ, ಅಂತಹ ಕಾರ್ಯ ಆಗಿಲ್ಲ.
ನಮ್ಮಲ್ಲೇನಿದೆ ಸ್ಥಿತಿ
ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ 30 ಟನ್ ಕಸ ಸಂಗ್ರಹವಾಗುತ್ತದೆ. ನಿತ್ಯ 13 ರಿಂದ 14 ಟನ್‌ನಷ್ಟು ಹಸಿ ಕಸ ಸಂಗ್ರಹವಾಗುತ್ತಿದ್ದು, ತಿಂಗಳಿಗೆ 25 ರಿಂದ 30 ಟನ್ ಕಸವನ್ನು ಗೊಬ್ಬರ ಮಾಡಲಾಗುತ್ತಿದೆ. ಬಯೋ ಗ್ಯಾಸ್ ಘಟಕ ಸಹ ನಗರಸಭೆ ಹೊಂದಿದೆ. 18 ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದೆ. 12 ಎಕರೆ ಈಗಾಗಲೇ ಭರ್ತಿಯಾಗಿದೆ. ತಿಂಗಳಿಗೆ 25 ರಿಂದ 30 ಟನ್ ಗೊಬ್ಬರ ಉತ್ಪಾದನೆ ಮಾಡಲಾಗುತ್ತದೆ. ಸಿಮೆಂಟ್ ಕಾರ್ಖಾನೆಗಳಿಗೆ 299 ಟನ್‌ನಷ್ಟು ಕಸದ (ಆರ್‌ಡಿಎಫ್) ಕಳುಹಿಸಲಾಗುತ್ತದೆ.
ಬಾಗಲಕೋಟೆಯಲ್ಲಿ ಹಸಿ, ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗದಿರುವುದರಿಂದ ತ್ಯಾಜ್ಯ ಘಟಕದಲ್ಲಿ ಕಸ ವಿಂಗಡಣೆಯೇ ದೊಡ್ಡ ಸವಾಲಾಗಿದೆ. ಪೌರ ಕಾರ್ಮಿಕರ ಕೊರತೆಯೂ ಇದೆ. ಇದಕ್ಕೆ ಪರಿಹಾರ ಸೂಚಿಸಬೇಕಿದ್ದ ಅಧ್ಯಯನ ಪ್ರವಾಸವೂ ನಗರಸಭೆ ನೆರವಿಗೆ ಬಂದಿಲ್ಲ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸದಸ್ಯರನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗಿತ್ತು. ವರದಿ ಸಲ್ಲಿಕೆ ಬಗ್ಗೆ ಮಾಹಿತಿ ಇಲ್ಲ
ವಾಸಣ್ಣ ಪೌರಾಯುಕ್ತ, ನಗರಸಬೆ
ಸತತ ಎಂಟು ಬಾರಿ ಸ್ವಚ್ಛ ನಗರಿ
ಇಂದೋರ್ ಅಂದಾಜು 34.82 ಲಕ್ಷ ಜನರನ್ನು ಹೊಂದಿದೆ. ಸ್ವಚ್ಛ ಭಾರತ್ ಮಿಷನ್ ನಡೆಸುವ ಸಮೀಕ್ಷೆಯಲ್ಲಿ ಸತತ ಎಂಟನೇ ಬಾರಿಗೆ ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಗಳಿಸಿದೆ. 2024–25ನೇ ಸಾಲಿನಲ್ಲಿ 15 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಗಿನ್ನಿಸ್ ದಾಖಲೆ ಮಾಡಿದೆ. ಹಸಿ ಒಣ ಕಸವನ್ನು ವಿಂಗಡಿಸಿಯೇ ಜನರು ನೀಡುತ್ತಾರೆ. ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧಿಸಿರುವುದರಿಂದ ಬಟ್ಟೆ ಚೀಲಗಳ ಬಳಕೆ ಇದೆ. ಕಸವನ್ನು ಕಡಿಮೆ ಮಾಡುವುದು ಮರು ಬಳಕೆ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜೈವಿಕ–ಸಿಎನ್‌ಸಿ ಉತ್ಪಾದನಾ ಘಟಕ ಸ್ಥಾಪಿಸಲಾಗಿದ್ದು 17000 ರಿಂದ 18000 ಕೆಜಿ ಜೈವಿಕ–ಸಿಎನ್‌ಜಿ 10 ಟನ್ ಸಾವಯವ ಗೊಬ್ಬರ ಉತ್ಪಾದನೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.