
ಬಾಗಲಕೋಟೆ: ಸಮಾಜವನ್ನೇ ಕುಟುಂಬ ಮಾಡಿಕೊಂಡು ಶ್ರಮಿಸುವ ಕೆಲಸ ಮಠಾಧಿಪತಿಯದಾಗಿದ್ದಾಗಿದೆ. ಮಠಕ್ಕೆ ಬರುವಾಗ ರಾಜಕೀಯ ವ್ಯಕ್ತಿಗಳಾಗದೇ ಭಕ್ತರಾಗಿ ಬನ್ನಿ ಎಂದು ಟೀಕಿನಮಠದ ನೂತನ ಸ್ವಾಮೀಜಿ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದಲ್ಲಿ ಭಾನುವಾರ ಕಾರ್ಯಕ್ರಮದಲ್ಲಿ ವಿರಕ್ತಮಠದ ಜಡೆಯ ಶಾಂತಲಿಂಗೇಶ್ವರ ಲಿಂಗಹಸ್ತದಿಂದ ಚರಪಟ್ಟಾಧಿಕಾರ ಪಡೆದು ಶೂನ್ಯಪೀಠಾರೋಹಣ ಮಾಡಿ ಮಾತನಾಡಿದ ಅವರು, ಗುರುವಿಗಾಗಿ ತಾವು ಮಾಡಿದ ಶ್ರಮ ಸ್ಮರಣಾದಾಯಕವಾಗಿದೆ. ತಮ್ಮ ಮುಡಿಗೆ ಹೂ ತಾರದೇ ಹುಲ್ಲನೆಂದು ತರಲಾರೆ. ಸಮಾಜದ ಮಗುವಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಕಾವಿ ಜೀವನಕ್ಕೆ ಶಕ್ತಿಯಾದ ಕುಮಾರ ಸ್ವಾಮೀಜಿ , ಬಸವಣ್ಣ, ನಿಜಗುಣ ಸ್ವಾಮಿಗಳ ಮಾರ್ಗದಲ್ಲಿ ನಡೆದು ಟೀಕಿನಮಠ (ಟೆಂಗಿನಮಠ) ಪರಂಪರೆಯನ್ನು ಮುನ್ನಡೆಸುತ್ತೇನೆ. ಬಾಗಲಕೋಟೆ ಭಕ್ತರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಪಟ್ಟಾಧಿಕಾರ ಸಮಿತಿ ಗೌರವಾಧ್ಯಕ್ಷ ಚರಂತಿಮಠದ ಪ್ರಭು ಸ್ವಾಮೀಜಿ ಮಾತನಾಡಿ, ಗುರು ತನ್ನ ಶಕ್ತಿ ಮತ್ತು ಸ್ಥಾನವನ್ನು ಶಿಷ್ಯನಿಗೆ ನೀಡುವುದರ ಮೂಲಕ ಶಿಷ್ಯನನ್ನು ಗುರುವಾಗಿಸುವುದು ಶೂನ್ಯಪೀಠಾರೋಹಣ ಆಗಿದೆ. ಎಲ್ಲವೂ ಇದ್ದು, ಎಲ್ಲವನ್ನೂ ಸಮಾಜಕ್ಕೆ ಅರ್ಪಣೆ ಮಾಡಿ ಶೂನ್ಯಭಾವದಿಂದ ದೇವರಿಗೆ ಶರಣಾಗುವುದು ಶೂನ್ಯಪೀಠದ ಉದ್ದೇಶವಾಗಿದೆ ಎಂದರು.
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಟೀಕಿನಮಠ ಸಂಪ್ರದಾಯದಿಂದ ಕೂಡಿದ ಮಠವಾಗಿದೆ. ಬ್ರಹ್ಮಜ್ಞಾನಕ್ಕಾಗಿ ಆಶ್ರಮ, ಗುರುಕುಲಗಳು ಹುಟ್ಟಿಕೊಂಡವು. 19 ಮತ್ತು 20ನೇ ಶತಮಾನದ ಪೂರ್ವದಲ್ಲಿ ಮಠಾಧೀಶರ ಕೆಲಸವನ್ನು ಇಡೀ ಮಾನವ ಕುಲ ಮರೆಯಲು ಸಾಧ್ಯವಿಲ್ಲ ಎಂದರು.
ಸಮಾಜದ ಏಳಿಗೆ, ಕಲ್ಯಾಣಕ್ಕಾಗಿ ಮಠಗಳಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಮಾನವ ಕುಲಕೋಟಿಗಾಗಿ ಬಸವಣ್ಣ, ಅಲ್ಲಮಪ್ರಭು ಅವರು ವಚನದಲ್ಲಿನ ಕಾಯಕದ ಸಾರಾಂಶ ಅರಿಯಬೇಕು. ಜಾತಿ ಬದಿಗಿಟ್ಟುಕೊಂಡು, ಇತಿಹಾಸದ ಪುಟವನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಕೊಡಬೇಕು ಎಂದು ಹೇಳಿದರು.
ಸಮಿತಿ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಪಟ್ಟಾಧಿಕಾರ ಕಾರ್ಯಕ್ರಮದಿಂದ ಬಾಗಲಕೋಟೆಯಲ್ಲಿ ಧಾರ್ಮಿಕ ಜಾಗೃತಿಯಾಗಿದೆ. ಸಮಾಜಕ್ಕೆ ಸ್ವಾಮಿಯ ಪರಿಚಯ ಆಗಬೇಕಾದರೆ ತಪಸ್ಸು, ಪೂಜಾನಿಷ್ಠೆ, ಶಿವನಪೂಜೆ ಮಾಡಬೇಕು. ಮಾತಿನ ಮೇಲೆ ಹಿಡಿತ, ಮೈ ತುಂಬಾ ಕಣ್ಣು ಇದ್ದಾಗ ಮಾತ್ರ ಸಮಾಜದಲ್ಲಿ ನಂಬಿಕಸ್ಥ ಸ್ವಾಮಿಯಾಗಲು ಸಾಧ್ಯ ಎಂದರು.
ಎರಡೆತ್ತಿನಮಠದ ಸಿದ್ಧಲಿಂಗ ಸ್ವಾಮೀಜಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಮುರಾಘಾಮಠದ ಕಾಶಿನಾಥ ಸ್ವಾಮೀಜಿ, ಗವಿಮಠದ ಬಸವಲಿಂಗ ಸ್ವಾಮೀಜಿ, ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ, ಸದಾನಂದ ಶಿವಾಚಾರ್ಯ, ಒಪ್ಪತ್ತೇಶ್ವರ ಸ್ವಾಮಿಜಿ, ಕಲ್ಮಠದ ಗುರುಪಾದ ಶಿವಾಚಾರ್ಯ ದೇವರು, ಕಾರಂಜಿಮಠದ ಶಿವಯೋಗಿ ದೇವರು, ವಿವೇಕಾನಂದ ದೇವರು, ಚಂದ್ರಶೇಖರ ಸ್ವಾಮೀಜಿ ಮತ್ತಿತರರು ಇದ್ದರು.
ಬೀಳೂರ ಅಜ್ಜನ ಗುಡಿಯಿಂದ ಪ್ರಾರಂಭವಾದ ಟೀಕಿನಮಠದ ನೂತನ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಬಸವೇಶ್ವರ ವೃತ್ತ, ಮಹಾತ್ಮಾ ಗಾಂಧಿ ರಸ್ತೆ, ಅಡತ ಬಜಾರ ಮೂಲಕ ಟೀಕಿನಮಠದಲ್ಲಿ ಸಮಾರೋಪಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.