
ಬಾಗಲಕೋಟೆ: ಜಿಲ್ಲೆಯಲ್ಲಿ ಚಳಿ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ತಾಪಮಾನದಲ್ಲಿ ಇಳಿಕೆಯಾಗುತ್ತಿದೆ. ಐದು ದಿನಗಳಕಾಲ ಶೀತಗಾಳಿ ಬೀಸುವ ಸಾಧ್ಯತೆಗಳಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಡಿಸೆಂಬರ್ ಆರಂಭದಲ್ಲಿ ಚಳಿಯ ಪ್ರಮಾಣ ಮಧ್ಯಮವಾಗಿತ್ತು. ಕಳೆದ ನಾಲ್ಕಾರು ದಿನಗಳಿಂದ ಚಳಿ ತೀವ್ರತೆ ಪಡೆದುಕೊಂಡಿದೆ. ಸಂಜೆಯಾಗುತ್ತಿದ್ದಂತೆಯೇ ನಡಗುವಂತಹ ಚಳಿ ಶುರುವಾಗಿದೆ. ಬೆಳಗಿನ ಹೊತ್ತೂ ಚಳಿಯ ತೀವ್ರತೆ ಜೋರಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಮಂಜು ಕವಿದಿರುವುದನ್ನೂ ಕಾಣಬಹುದಾಗಿದೆ.
ಡಿ.13ರಂದು ಬಾಗಲಕೋಟೆಯಲ್ಲಿ 7.1 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಮಧ್ಯಾಹ್ನದ ವೇಳೆ ಬಿಸಿಲಿದ್ದರೂ, ಬೆಳಿಗ್ಗೆ, ಸಂಜೆ ಹಾಗೂ ರಾತ್ರಿ ಚಳಿ ತೀವ್ರವಾಗಿದೆ. ಮೋಟಾರ್ ಬೈಕುಗಳಲ್ಲಿ ಸಂಚರಿಸುವುದೇ ಸವಾಲಾಗಿದೆ.
ಬೆಳಿಗ್ಗೆ ಹಾಗೂ ಸಂಜೆ ಬಳಿಕ ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕುವಂತೆ ಮಾಡಿದೆ. ಶೀತಗಾಳಿ ಮತ್ತು ಅಧಿಕ ಚಳಿಯ ಪರಿಣಾಮ ವಾಯುವಿಹಾರಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಹೊರಟಿರುವವರೂ ಚಳಿಯಿಂದ ರಕ್ಷಣೆ ಪಡೆಯಲು ಬೆಚ್ಚಗಿನ ವಸ್ತ್ರಗಳನ್ನು ಧರಿಸಿಕೊಂಡು ಹೊರಗಡೆ ಕಾಲಿಡುತ್ತಿದ್ದಾರೆ.
ಚಳಿಯಿಂದ ತಪ್ಪಿಸಿಕೊಳ್ಳಲು ಟೋಪಿ, ಸ್ವೆಟರ್, ಜಾಕೆಟ್, ಮಫ್ಲರ್ ಸೇರಿದಂತೆ ಹಲವು ವಸ್ತುಗಳನ್ನು ಧರಿಸುತ್ತಿದ್ದಾರೆ. ಜೊತೆಗೆ ಅಲ್ಲಲ್ಲಿ ಬೆಂಕಿ ಕಾಯಿಸಿಕೊಳ್ಳುವುದನ್ನು ಕಾಣಬಹುದಾಗಿದೆ.
ಅಧಿಕ ಚಳಿಯಿಂದಾಗಿ ಚಿಕ್ಕಮಕ್ಕಳ, ವಯೋವೃದ್ಧರ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದ್ದು, ನೆಗಡಿ, ಕೆಮ್ಮು, ಜ್ವರ, ಮೈಕೈನೋವು ಇತ್ಯಾದಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
‘ಹೆಚ್ಚು ಚಳಿ ಇರುವ ಸಮಯದಲ್ಲಿ ಹೊರಗಡೆ ಹೋಗುವುದನ್ನು ಮುಂದೂಡಬೇಕು. ಬಿಸಿಯಾದ ಆಹಾರ ಸೇವಿಸಬೇಕು. ಆರೋಗ್ಯದಲ್ಲಿ ತೊಂದರೆ ಕಾಣಿಸಿದರೆ ವೈದ್ಯರ ಸಲಹೆ ಪಡೆದುಕೊಳ್ಳಿ’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಕೋಣಿ.
6 ವರ್ಷಗಳಲ್ಲಿ ಕನಿಷ್ಠ ತಾಪಮಾನ :
ಡಿಸೆಂಬರ್ ತಿಂಗಳಲ್ಲಿ ದಾಖಲಾಗುವ ತಾಪಮಾನಕ್ಕೆ ಹೋಲಿಕೆ ಮಾಡಿದರೆ, ಆರು ವರ್ಷಗಳಲ್ಲಿ ಈ ವರ್ಷ ಡಿಸೆಂಬರ್‌ನಲ್ಲಿ ಕನಿಷ್ಠ ತಾಪಮಾನ 7.1 ಸೆಲ್ಷಿಯಸ್ ದಾಖಲಾಗಿದೆ. 2020ರಲ್ಲಿ 10.5, 2021ರಲ್ಲಿ 11.4, 2022ರಲ್ಲಿ 9.7, 2023ರಲ್ಲಿ 10.3, 2024ರಲ್ಲಿ 12.5 ದಾಖಲಾಗಿತ್ತು.
ಕೃಷಿಯಲ್ಲೂ ಇರಲಿ ಮುಂಜಾಗ್ರತೆ
ಚಳಿಯ ಪರಿಣಾಮ ಬೆಳೆಗಳ ಮೇಲೂ ಆಗುತ್ತಿದ್ದು ಕೃಷಿಕರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಇಂತಿವೆ. ಕಡಲೆ ಗೋಧಿ ಕಬ್ಬು ಬೆಳೆಗಳಲ್ಲಿ ಸಂಜೆ ಅವಧಿಯಲ್ಲಿ ಒಂದು ತೆಳು ನೀರು ಒದಗಿಸಬೇಕು. ಸಾರಜನಕಯುಕ್ತ ಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡಬೇಕು. ಬಾಳೆ ಮತ್ತು ದ್ರಾಕ್ಷಿ ಗಿಡಗಳಲ್ಲಿ ಅತಿಯಾದ ತಂಪಿನಿಂದ ಹಣ್ಣುಗಳು ಸೀಳುವುದನ್ನು ತಪ್ಪಿಸಲು ಅವುಗಳನ್ನು ಫಾಲಿಥಿನ್/ಗೋಣಿ ಚೀಲಗಳಿಂದ ಮುಚ್ಚಬೇಕು. ಬೆಳೆದು ನಿಂತ ಎಳೆ ಹುಲ್ಲನ್ನು ಮುಂಜಾನೆ ಮಂಜು ಬಿದ್ದಿರುವ ಸಂದರ್ಭದಲ್ಲಿ ಕುರಿ ಮತ್ತು ಆಡುಗಳಿಗೆ ಮೇಯಿಸಬಾರದು ಇದರಿಂದ ಕರುಳು ಬೇನೆ ರೋಗದ ಸಾಧ್ಯತೆ ಇರುತ್ತದೆ. ಕೋಳಿ ಮನೆಗಳಲ್ಲಿ ಪ್ಲೋರೋಸೆಂಟ್ ವಿದ್ಯುತ್ ಬಲ್ಬಗಳನ್ನು ಅಳವಡಿಸುವ ಮೂಲಕ ಕೊಠಡಿ ಉಷ್ಣಾಂಶ ಕಾಪಾಡಿಕೊಳ್ಳಬೇಕು ಎಂದು ಕೃಷಿ ಹವಾಮಾನ ತಜ್ಞ ಬಸವರಾಜ ನಾಗಲೀಕರ ತಿಳಿಸಿದರು.
Graphic text / Statistics - ಬಾಗಲಕೋಟೆ ತಾಪಮಾನ ವಿವರ ದಿನಾಂಕ; ತಾಪಮಾನ (ಸೆಲ್ಷಿಯಸ್) ಡಿ.09;10.9 ಡಿ.10;8.9 ಡಿ.11;8.6 ಡಿ.12;7.6 ಡಿ.13;7.1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.