ಬಾಗಲಕೋಟೆ: ‘ವೀರ ವನಿತೆಯರ ಇತಿಹಾಸವಿರುವ ಭಾರತದ ಮಣ್ಣಿನ ಅಸ್ಮಿತೆಯ ಪರಿಚಯ ಇಂದಿನ ಯುವ ಪೀಳಿಗೆಗೆ ಅಗತ್ಯವಾಗಿದೆ’ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ವೀರ ವನಿತೆ ಕಿತ್ತೂರ ಚೆನ್ನಮ್ಮ 200ನೇ ವರ್ಷದ ವಿಜಯೋತ್ಸವ ಹಾಗೂ ಅಭಯ ರಾಣಿ ಅಬ್ಬಕ್ಕ 500ನೇ ಜಯಂತ್ಯುತ್ಸವ ಅಂಗವಾಗಿ ಬಾಗಲಕೋಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಥಯಾತ್ರೆ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಬ್ಬರ ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಯುವ ಜನರಿಗೆ ತಿಳಿಸುವ ಉದ್ದೇಶದಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಣಿ ಚೆನ್ನಮ್ಮನ ಕಿಚ್ಚು, ಅಬ್ಬಕ್ಕನ ಸ್ಫೂರ್ತಿ ಪ್ರತಿ ಮನೆ, ಮನೆಗಳಲ್ಲಿ ಬೆಳಗಬೇಕಿದೆ. ಪೂರ್ವಜರು ಹಾಕಿ ಕೊಟ್ಟ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ‘ರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕ್ಕರ ಸಾಧನೆ ಇನ್ನೂ ಮಾಸಿಲ್ಲ. ಅವರ ದೇಶಭಕ್ತಿ ಅಜರಾಮರವಾಗಿರುತ್ತದೆ. ದೇಶದ ಬೆಳವಣಿಗೆಯಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಪಾತ್ರ ಮಹತ್ವದಾಗಿದೆ’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಗುಳೇದಗುಡ್ಡದ ಮುರಘಾಮಠದ ಅಭಿನವ ಕಾಡ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ದೇಶಕ್ಕಾಗಿ ನಾವು ಯಾವ ತ್ಯಾಗಕ್ಕೂ ಸಿದ್ದರಾಗಿರಬೇಕು. ದೇಶ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕೆ ನಮ್ಮ ಕೊಡುಗೆ ಏನು ಎಂಬುದು ಮುಖ್ಯ’ ಎಂದರು.
ಇದೇ ಸಂದರ್ಭದಲ್ಲಿ ಅಂಬಾಜಿ ಸುಗತೇಕರ ಅವರನ್ನು ಗೌರವಿಸಲಾಯಿತು. ಎಬಿವಿಪಿ ಉತ್ತರ ಪ್ರಾಂತ ಉಪಾಧ್ಯಕ್ಷರಾದ ಸುಮಾ ಬೊಳರೆಡ್ಡಿ, ಜಿಲ್ಲಾ ಸಂಚಾಲಕ ವಿಪುಲ್ ಪೇಟಕರ, ನಗರ ಅಧ್ಯಕ್ಷ ಬಸವರಾಜ ಕುಂಬಾರ, ನಗರ ಕಾರ್ಯದರ್ಶಿ ರವಿ ದಂಡಗಿ ಇದ್ದರು.
ಗಮನ ಸೆಳೆದ ರಥಯಾತ್ರೆ
ಬಾಗಲಕೋಟೆ: ರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕನ ಮೂರ್ತಿ ಹಾಗೂ ಸಾಧನೆಯ ಮಾಹಿತಿಯಿರುವ ರಥಯಾತ್ರೆ ನೋಡುಗರ ಗಮನ ಸೆಳೆಯಿತು. ಬೀಳೂರ ಅಜ್ಜನ ಗುಡಿ ಆವರಣದಲ್ಲಿ ರಥಯಾತ್ರೆಗೆ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಚಾಲನೆ ನೀಡಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ ಶ್ರೀಲತಾ ಹೆರಂಜಲ್ ಬಸವರಾಜ ಹುನಗುಂದ ಜ್ಯೋತಿ ಕದಾಂಪುರ ಶ್ರೀದೇವಿ ಪವಾಡಶೆಟ್ಟರ್ ಸುಷ್ಮಾದೇವಿ ವಡೆಯರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.