ADVERTISEMENT

ತ್ಯಾಜ್ಯದಿಂದ ತುಂಬಿದ ಪುಷ್ಕರಣಿ,ಹಳ್ಳ: ಬನಶಂಕರಿ ದರ್ಶನಕ್ಕೆ ಬರುವ ಭಕ್ತರ ಪರದಾಟ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 4:25 IST
Last Updated 6 ನವೆಂಬರ್ 2025, 4:25 IST
ಬಾದಾಮಿ ಸಮೀಪದ ಬನಶಂಕರಿ ದೇವಾಲಯದ ಎದುರಿನ ಹರಿದ್ರಾತೀರ್ಥ ಪುಷ್ಕರಣಿಯಲ್ಲಿ ತ್ಯಾಜ್ಯ
ಬಾದಾಮಿ ಸಮೀಪದ ಬನಶಂಕರಿ ದೇವಾಲಯದ ಎದುರಿನ ಹರಿದ್ರಾತೀರ್ಥ ಪುಷ್ಕರಣಿಯಲ್ಲಿ ತ್ಯಾಜ್ಯ   

ಬಾದಾಮಿ: ಉತ್ತರ ಕರ್ನಾಟಕದ ಪವಿತ್ರ ಪುಣ್ಯ ಕ್ಷೇತ್ರವಾದ ಆದಿಶಕ್ತಿ ದೇವತೆ ಬನಶಂಕರಿ ದೇವಾಲಯದ ಪರಿಸರದಲ್ಲಿ ಹರಿದ್ರಾತೀರ್ಥ ಪುಷ್ಕರಣಿ ಮತ್ತು ಸರಸ್ವತಿ ಹಳ್ಳದಲ್ಲಿ ತ್ಯಾಜ್ಯವು ಭರ್ತಿಯಾಗಿ ಹಳ್ಳದ ನೀರು ಕಪ್ಪಾಗಿ ಸುತ್ತ ದುರ್ವಾಸನೆ ಹರಡಿದೆ.

ಹರಿದ್ರಾತೀರ್ಥ ಪುಷ್ಕರಣಿ ಮತ್ತು ಸರಸ್ವತಿ ಹಳ್ಳವನ್ನು ಭರ್ತಿಮಾಡಲು ಮಲಪ್ರಭಾ ಎಡದಂಡೆ ಕಾಲುವೆಯಿಂದ ನೀರು ಬಿಡಲಾಗಿದೆ. ಕಾಲುವೆ ನೀರಿನ ಜೊತೆಗೆ ಬಾದಾಮಿ ಚರಂಡಿ ನೀರು ಹರಿದು ಹಳ್ಳದ ನೀರು ಕಪ್ಪಾಗಿ ಹರಿಯುತ್ತಿದೆ. ಕೆಲವು ಭಕ್ತರು ಸರಸ್ವತಿ ಹಳ್ಳದಲ್ಲಿ ಸ್ನಾನ ಮಾಡುವುದು ಕಂಡು ಬಂದಿತು.

ಬನಶಂಕರಿ ದೇವಾಲಯದ ಎದುರಿಗೆ ವಿಶಾಲವಾದ ಹರಿದ್ರಾತೀರ್ಥ ಪುಷ್ಕರಣಿ ಕಾಲುವೆ ನೀರಿನಿಂದ ಭರ್ತಿಯಾಗಿದೆ. ಮೆಟ್ಟಿಲುಗಳ ಮೇಲೆ ಪ್ಲಾಸ್ಟಿಕ್ ಬಾಟಲ್, ಬಟ್ಟೆ, ಕಸ ಹರಡಿದೆ. ಆಗ್ನೇಯ ದಿಕ್ಕಿನಲ್ಲಿ ತ್ಯಾಜ್ಯ ತುಂಬಿ ಸುತ್ತ ದುರ್ವಾಸನೆ ಹರಡಿದೆ.

ADVERTISEMENT

ಸರಸ್ವತಿ ಹಳ್ಳದ ನೀರು ಸಂಪೂರ್ಣವಾಗಿ ಕಪ್ಪಾಗಿ ಹರಿಯುತ್ತಿದೆ. ನೀರಾವರಿ ಕಾಲುವೆ ನೀರಿನ ಜೊತೆಗೆ ಬಾದಾಮಿ ಚರಂಡಿ ನೀರು ಹಳ್ಳಕ್ಕೆ ಸೇರುವುದರಿಂದ ನೀರು ಕಪ್ಪಾಗಿ ಹರಿಯುತ್ತಿದೆ. ಭಕ್ತರಿಗೆ ಗೊತ್ತಿರದೇ ಕೆಲವರು ಇಲ್ಲಿ ಸ್ನಾನ ಮಾಡುವರು.

‘ನಾವು ಪ್ರತಿ ಹುಣ್ಣಿಮೆಗೆ ದೇವಾಲಯಕ್ಕೆ ಬರುತ್ತೇವೆ. ಜಾತ್ರೆಯಲ್ಲಿ ಇದ್ದ ತ್ಯಾಜ್ಯವನ್ನು ಇನ್ನೂ ತೆಗೆದಿಲ್ಲ. ಹರಿದ್ರಾತೀರ್ಥ ಪುಷ್ಕರಣಿ ಮತ್ತು ಸರಸ್ವತಿ ಹಳ್ಳದಲ್ಲಿ ದುರ್ವಾಸನೆ ಹರಡಿದೆ. ಪುಣ್ಯ ಕ್ಷೇತ್ರವು ಸ್ವಚ್ಛವಾಗಿರಬೇಕು’ ಎಂದು ಗದಗ-ಬೆಟಗೇರಿ ಭಕ್ತ ಮಲ್ಲನಗೌಡ ಪಾಟೀಲ ಪ್ರತಿಕ್ರಿಯಿಸಿದರು.

‘ಭಕ್ತರು ಪುಷ್ಕರಣಿಯಲ್ಲಿ ಮತ್ತು ಹಳ್ಳದಲ್ಲಿ ಬಟ್ಟೆ, ಪ್ಲಾಷ್ಟಿಕ್ ಮತ್ತಿತರ ವಸ್ತುಗಳನ್ನು ಎಸೆಯದೇ ಪುಣ್ಯ ಕ್ಷೇತ್ರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ವಚ್ಛತೆಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್..ಎಚ್.ವಾಸನ ಭಕ್ತರಿಗೆ ವಿನಂತಿಕೊಂಡರು.

ಹರಿದ್ರಾತೀರ್ಥ ಪುಷ್ಕರಣಿ ಮತ್ತು ಸರಸ್ವತಿ ಹಳ್ಳದ ಸುತ್ತ ತ್ಯಾಜ್ಯವು ಸಂಗ್ರಹವಾಗಿದೆ. ಸ್ವಚ್ಛತೆ ಇಲ್ಲದೇ ಭಕ್ತರಿಗೆ ನೋವಾಗಿದೆ. ಪುಣ್ಯ ಕ್ಷೇತ್ರವು ಸ್ವಚ್ಛವಾಗಿರಬೇಕು ಎಂದು ಭಕ್ತರು ಒತ್ತಾಯಿಸಿದರು.

‘ ಹರಿದ್ರಾತೀರ್ಥ ಪುಷ್ಕರಣಿಯನ್ನು ಸ್ವಚ್ಛಮಾಡಲಾಗುತ್ತಿದೆ. ಇನ್ನುಳಿದ ತ್ಯಾಜ್ಯವನ್ನು ಸ್ವಚ್ಛತೆ ಮಾಡಲಾಗುವುದು ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ ಅನಿರುದ್ಧ ದೇಸಾಯಿ ಪ್ರತಿಕ್ರಿಯಿಸಿದರು.

ಬನಶಂಕರಿ ದೇವಾಲಯದ ಪಕ್ಕದಲ್ಲಿ ಕಪ್ಪು ನೀರಿನಿಂದ ಹರಿಯುತ್ತಿರುವ ಸರಸ್ವತಿ ಹಳ್ಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.