ADVERTISEMENT

ಕೂಡಲಸಂಗಮ| ರಾಷ್ಟ್ರ ಮಟ್ಟದಲ್ಲಿ ಬಸವ ಸ್ಮರಣೆ ನಡೆಯಲಿ: ಬಸವಲಿಂಗ ಪಟ್ಟದೇವರು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 4:14 IST
Last Updated 12 ನವೆಂಬರ್ 2025, 4:14 IST
<div class="paragraphs"><p>ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಿದ ಭಕ್ತರಿಗೆ ಗೌರವ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಮಾತನಾಡಿದರು</p></div>

ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಿದ ಭಕ್ತರಿಗೆ ಗೌರವ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಮಾತನಾಡಿದರು

   

ಕೂಡಲಸಂಗಮ: ಎಲ್ಲ ಲಿಂಗಾಯತ ಮಠಾಧೀಶರು, ಬಸವಪರ ಸಂಘಟನೆಗಳು ಕೂಡಿ ಪ್ರತಿ ವರ್ಷ ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಣೆ ಮಾಡಬೇಕಾಗಿದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಹೇಳಿದರು.

ಮಂಗಳವಾರ ಕೂಡಲಸಂಗಮ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನಡೆದ ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿವಿಗೊಳಿಸಿದ ಭಕ್ತರಿಗೆ ಗೌರವ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ ಬಸವ ಸಂಸ್ಕೃತಿ ಅಭಿಯಾನವನ್ನು ಗ್ರಾಮ, ಹೊಬಳಿ, ತಾಲೂಕಾ ಮಟ್ಟದಲ್ಲಿ ಆಯೋಜನೆ ಮಾಡುವ ಯೋಜನೆ ಇದೆ. ಎಲ್ಲ ಲಿಂಗಾಯತ ಒಳಪಂಗಡಗಳನ್ನು ಸೇರಿಸಿಕೊಂಡು ಬಸವ ಸಂಸ್ಕೃತಿ ಬಿಂಬಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು. ಇಂದಿನ ಯುವಕರಿಗೆ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಮಾನ್ಯತೆ ದೊರೆಯುವುದರಿಂದ ಆಗುವ ಪ್ರಯೋಜನಗಳ ಕುರಿತು ಅರಿವು, ಜಾಗೃತಿ ಮೂಡಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದರು.

ADVERTISEMENT

ಗದಗ ತೋಂಟದಾರ್ಯ ಸಂಸ್ಥಾನಮಠದ ಸಿದ್ಧರಾಮ ಸ್ವಾಮೀಜಿ ಮಾತನಾಡಿ ಬಹುತ್ವ ಸಂಸ್ಕೃತಿಯ ಭಾರತದಲ್ಲಿ ಒಂದೇ ಧರ್ಮ, ಒಂದೇ ರಾಷ್ಟ್ರ ಎಂದು ಹೇಳುವುದು ಮೂರ್ಖತನದ ಪರಮಾವಧಿಯಾಗಿದೆ. ಬಸವ ಸಂಸ್ಕೃತಿ ಅಭಿಯಾನದ ಯಶಸ್ಸನ್ನು ಕೆಲವರು ಹೆಮ್ಮೆಪಡದೆ, ಅಸೂಹೆ ಪಟ್ಟುಕೊಂಡು ಇಲ್ಲ ಸಲ್ಲದ ಆರೋಪ ಮಾಡಿದರು. ಚಾರಿತ್ರ್ಯಕ್ಕೆ ದಕ್ಕೆ ತರುವ ಕಾರ್ಯ ಮಾಡಿರುವುದು ಸರಿಯಲ್ಲ. ಮಠಾಧಿಪತಿಗಳಾದವರು ಸಂಯಮದಿಂದ ವರ್ತಿಸುವುದನ್ನು ಕಲಿಯಬೇಕು ಎಂದರು.

ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಲಿಂಗಾಯತ ಮಠಾಧೀಶರು ಬಸವತತ್ವ ಆಧಾರದ ಮೇಲೆ ಮಠ ಮುಂದುವರೆಸುತ್ತೆವೆ ಎಂದು ಮೊದಲು ಗಟ್ಟಿಯಾಗಬೇಕು. ಪ್ರತಿ ತಿಂಗಳು ಆಯಾ ಜಿಲ್ಲೆಯಲ್ಲಿ ಮಠಾಧಿಪತಿಗಳಿಂದ ಬಸವತತ್ವದ ಚಟುವಟಿಕೆಗಳು ನಡೆಯಬೇಕು. ಡಿಸೆಂಬರ್ 27 ರಿಂದ 29ರ ವರೆಗೆ 3 ದಿನಗಳ ಕಾಲ ಲಿಂಗಾಯತ ನಿಜಾಚರಣೆಯ ಕುರಿತು 35 ವರ್ಷದೊಳಗಿನವರಿಗೆ ಕಮ್ಮಟವನ್ನು ಸಾಣೆಹಳ್ಳಿಯಲ್ಲಿ ಹಮ್ಮಿಕೊಂಡಿದೆ ಭಕ್ತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಮಾತನಾಡಿ ಬಸವ ಸಂಸ್ಕೃತಿ ಅಭಿಯಾನ ವಿಫಲಗೊಳಿಸಲು ಹುಬ್ಬಳಿಯಲ್ಲಿ ಏಕತಾ ಸಮಾವೇಶ, ಬಸವ ಕಲ್ಯಾಣದಲ್ಲಿ ದಸರಾ ದರ್ಬಾರ ಎಂಬ ಎರಡು ಕಾರ್ಯಕ್ರಮಗಳು ನಡೆದು ವಿಫಲಗೊಂಡವು. ನಿರಿಕ್ಷೆಗಿಂತ ಹೆಚ್ಚು ಬಸವ ಸಂಸ್ಕೃತಿ ಅಭಿಯಾನ ಯಶಸ್ಸು ಖಂಡಿತು. ಲಿಂಗಾಯತ ಸಂಘಟನೆಗಳು ಏಕೀಕೃತವಾಗಿ ಬೆಳೆಯಬೇಕು. ಪ್ರತಿ ಗ್ರಾಮ ಮಟ್ಟದಲ್ಲಿ ಬಸವ ಸಂಘಟನೆ ಮಾಡಬೇಕು ಎಂದರು.

ಸಮಾರಂಭದಲ್ಲಿ ಇಲಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಬಸವ ಧರ್ಮ ಪೀಠದ ಮಾತೆ ಗಂಗಾದೇವಿ, ಮನಗುಂಡಿಯ ಬಸವಾನಂದ ಸ್ವಾಮೀಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿ, ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಬಾಲ್ಕಿ ಹಿರೇಮಠದ ಗುರುಬಸವ ಪಟ್ಟದೇವರು, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಸಾಹಿತಿ ಟಿ.ಆರ್.ಚಂದ್ರಶೇಖರ ಮುಂತಾದವರು ಇದ್ದರು. ಸಮಾರಂಭದಲ್ಲಿ ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಶ್ರಮಿಸಿದ ಭಕ್ತರನ್ನು ಸನ್ಮಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.