ಕೂಡಲಸಂಗಮ: ‘ನಾವೆಲ್ಲರೂ ಬಸವಜಯಮೃತ್ಯುಂಜಯ ಸ್ವಾಮೀಜಿಗಳ ನೈತಿಕ ಬೆಂಬಲಕ್ಕಾಗಿ ಬಂದಿದ್ದೇವೆ’ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ಯಾತ್ರಿ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲವೇ ದಿನಗಳಲ್ಲಿ ಬಾಗಲಕೋಟೆ, ಹುಬ್ಬಳ್ಳಿ ಅಥವಾ ಧಾರವಾಡ ಯಾವುದಾದರೂ ಒಂದು ಜಿಲ್ಲೆಯಲ್ಲಿ ಸಮಾಜದ ಮುಖಂಡರ ದೊಡ್ಡ ಸಭೆ ಮಾಡಿ ಮುಂದಿನ ನಡೆ ಪ್ರಕಟಿಸುತ್ತೇವೆ. ಮುಂದಿನ ನಡೆ ಏನಿರಬೇಕು ಎಂಬುದರ ಬಗ್ಗೆ ಶ್ರೀಗಳೊಂದಿಗೆ ಚರ್ಚಿಸಿದ್ದೇವೆ. ಮುಂದಿನ ಸಭೆಯಲ್ಲಿಯೇ ಎಲ್ಲವನ್ನೂ ತಿಳಿಸುತ್ತೇವೆ’ ಎಂದರು.
‘ಸ್ವಾಮೀಜಿ ಪೀಠಾಧಿಪತಿಯಾದ ನಂತರ ಸಮಾಜ ಸಂಘಟನೆ, ಹೋರಾಟ ಮಾಡಿದ್ದನ್ನು ಯಾರು ಪಂಚಮಸಾಲಿಗಳು ಮರೆಯೊದಿಲ್ಲ. ಸಮಾಜದ ಶಕ್ತಿಯನ್ನು ರಾಜ್ಯ ಸರ್ಕಾರ, ದೇಶಕ್ಕೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದು ಯಾವುದೇ ವಿಷಯದ ಬಗ್ಗೆ ಹೆಚ್ಚಿನ ಚರ್ಚಿಸಿಲ್ಲ. ನೈತಿಕ ಬೆಂಬಲಕ್ಕೆ ಬಂದಿದ್ದೇವೆ. ಯತ್ನಾಳ ಬರುವವರಿದ್ದರು, ಜ್ವರ ಬಂದಿದ್ದರಿಂದ ಬಂದಿಲ್ಲ’ ಎಂದರು.
‘ಜಗದ್ಗುರುಗಳಿಗೂ, ಟ್ರಸ್ಟಿಗೂ ಯಾವುದೇ ಸಂಬಂದವಿಲ್ಲ. ಅವರನ್ನು ಹೊರಹಾಕುವ ಅಧಿಕಾರವು ಇಲ್ಲ. ಸಮಾಜದವರು ಯಾವುದೇ ಒತ್ತಡಕ್ಕೆ ಒಳಗಾಗಬಾರದು. ಬಸವಜಯಮೃತ್ಯುಂಜಯ ಸ್ವಾಮೀಜಿಗಳು ನಿನ್ನೆ, ಇಂದು, ನಾಳೆ ಯಾವತ್ತೂ ಪ್ರಪ್ರಥಮ ಪಂಚಮಸಾಲಿ ಪೀಠದ ಜಗದ್ಗುರುಗಳಾಗಿ ಮುಂದುವರಿಯುತ್ತಾರೆ’ ಎಂದರು.
‘ಕೂಡಲಸಂಗಮದಲ್ಲಿ ಪರ್ಯಾಯ ಪೀಠ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಕೇವಲ ಒಬ್ಬರು, ಇಬ್ಬರೂ ಕೂಡಿಕೊಂಡು ತೆಗೆದುಕೊಳ್ಳುವ ನಿರ್ಣಯ ಆಗಬಾರದು. ಆ ಕಾರಣಕ್ಕಾಗಿ ಸಮಾಜ ಮುಖಂಡರ ದೊಡ್ಡ ಸಭೆ ಕರೆಯಲಾಗುತ್ತಿದೆ. ಸಮಾಜದ ಬಗ್ಗೆ ಕಾಳಜಿ, ಅಭಿಮಾನ ಇರುವವರು ಪಕ್ಷಾಂತೀತವಾಗಿ ಬರಬೇಕು’ ಎಂದರು.
ಪಂಚಮಸಾಲಿ ಹಿಂದೂ ಪೀಠನಾ, ಲಿಂಗಾಯತ ಪೀಠನಾ ಎಂಬ ಪ್ರಶ್ನೆಗೆ, ಯಾರಿಗೂ ಶಂಕೆ ಬೇಡ. ಹಿಂದೂ ಎಂಬ ಶಬ್ದ ಪರಂಪರಾಗತವಾಗಿ ಬಂದಿದೆ. ನಮ್ಮ ಧರ್ಮ ಹಿಂದೂ ಉಪಜಾತಿ ಅವರವರ ಕಾಲಂನಲ್ಲಿ ಬೇಕಾದನ್ನು ಬರೆಸಲಿ. ಪಂಚಮಸಾಲಿ ಪೀಠ ಒಂದೇ, ಹಿಂದು ಎನ್ನುವವರು ಹಿಂದು ಅಂದುಕೊಳ್ಳಲಿ, ವೀರಶೈವ ಎನ್ನುವವರು ವೀರಶೈವ ಅನ್ಕೊಳ್ಳಿ, ಲಿಂಗಾಯತ ಎನ್ನುವವರು ಲಿಂಗಾಯತ ಅನ್ಕೊಳ್ಳಿ. ಅವರವರ ಭಕುತಿಗೆ, ಭಾವಕ್ಕೆ ಅನುಗುಣವಾಗ ಅಂದುಕೊಳ್ಳಬಹುದು’ ಎಂದರು.
ಕಾಶಪ್ಪನವರು ಬಸವಜಯಮೃತ್ಯುಂಜಯ ಸ್ವಾಮೀಜಿ ಸಿಡಿ ಬಗ್ಗೆ ಮಾತನಾಡಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮನಸ್ಸಿಗೆ ಬಂದಂತೆ ಮಾತನಾಡೋದಲ್ಲ, ಇದೇ ಸ್ವಾಮೀಜಿಯನ್ನು ಟಿಕೆಟ್‌ಗಾಗಿ ಅಡ್ಡಾಡಿಸಿದರಲ್ಲ. ಸಮಾಜದ ವ್ಯಕ್ತಿಯ ಗೌರವ ಕಳೆಯುವ ಕೆಲಸವನ್ನು ಯಾರು ಮಾಡಬಾರದು. ನಾವು ಯಾರ ಗೌರವ ಕಡಿಮೆ ಮಾಡಲು ಹೋಗುತ್ತೇವೆ, ಆವಾಗ ನಮ್ಮ ಗೌರವವೇ ಕಡಿಮೆ ಆಗುವುದು. ವ್ಯಕ್ತಿಗಿಂತ ಸಮಾಜ ದೊಡ್ಡದು ಎಂಬುದರನ್ನು ಅರಿಯಬೇಕು’ ಎಂದರು.
ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಬಸವರಾಜ ಕಡಪಟ್ಟಿ, ಮಹಾಂತೇಶ ಕಡಪಟ್ಟಿ, ಅರವಿಂದ ಮಂಗಳೂರ ಮುಂತಾದವರು ಇದ್ದರು.
ಶೀಘ್ರದಲ್ಲಿ ರಾಜ್ಯಮಟ್ಟದ ಸಭೆ
‘ರಾಜ್ಯಮಟ್ಟದ ಭಕ್ತಾಧಿಗಳ ಸಭೆಯನ್ನು ಶೀಘ್ರದಲ್ಲಿಯೇ ಕರೆಯುತ್ತೇವೆ. ಎರಡೇ ದಿನದಲ್ಲಿ ಎಂದು ಎಲ್ಲಿ ಎಂಬುದನ್ನು ಮುಖಂಡರು ತಿಳಿಸುತ್ತಾರೆ’ ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿ ಸುದ್ದಿಗಾರರಿಗೆ ಹೇಳಿದರು. ಬಾಗಲಕೋಟೆಯಲ್ಲಿಯೇ ಮಾಡುವ ಉದ್ದೇಶ ಇದೆ. ಸಭೆಯ ನಂತರ ಸಮಾವೇಶ ಮಾಡುವ ಆಲೋಚನೆ ಇದೆ. ಎಲ್ಲ ಮುಖಂಡರು ಆಗಮಿಸಿ ಭಕ್ತಿಯ ಬೆಂಬಲ ನೀಡಿದ್ದಾರೆ. ಕೂಡಲಸಂಗಮದಲ್ಲಿಯೇ ಪಂಚಮಸಾಲಿ ಮೂಲ ಪೀಠ ಇರುವುದು ಶಾಖಾ ಪೀಠವನ್ನು ಭಕ್ತರು ಎಲ್ಲಿ ಮಾಡಲು ತಿಳಿಸುತ್ತಾರೆ. ಅಲ್ಲಿಯೇ ಮಾಡುತ್ತೇವೆ ಕೂಡಲಸಂಗಮವೇ ಮೂಲ ಪೀಠ. ಸ್ವತಂತ್ರ ಪೀಠ ಶೀಘ್ರದಲ್ಲಿಯೇ ಸ್ಥಳ ನಿಗದಿ ಮಾಡುತ್ತೇವೆ’ ಎಂದರು.
ಒಂದು ಗಂಟೆ ಚರ್ಚೆ
ಕೂಡಲಸಂಗಮ ಯಾತ್ರಿ ನಿವಾಸದ ಕೊಠಡಿಯಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿ ಮಾಜಿ ಸಚಿವ ಸಿ.ಸಿ.ಪಾಟೀಲ ಶಾಸಕ ಅರವಿಂದ ಬೆಲ್ಲದ ಸಿದ್ದು ಸವದಿ ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಒಂದು ಗಂಟೆಗಳ ಕಾಲ ಚರ್ಚಿಸಿದರು. ನಂತರ ಊಟ ಸವಿದು ಒಂದು ವಾಹನದಲ್ಲಿ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.