
ಬಾಗಲಕೋಟೆ: ಪ್ರಾದೇಶಿಕ ಹಾಗೂ ರಾಷ್ಟ್ರೀಯ ಸಮಸ್ಯೆಗಳ ಪರಿಹಾರಕ್ಕೆ ಎಂಜಿನಿಯರಿಂಗ್ ಪದವೀಧರರ ನವೀನ, ಕೌಶಲಾಧರಿತ ಸಂಶೋಧನೆ ಅಗತ್ಯವಾಗಿದೆ ಎಂದು ಮುಂಬೈ ಐಐಟಿಯ ಉಪನಿರ್ದೇಶಕ ಪ್ರೊ.ರವೀಂದ್ರ ಗುಡಿ ಹೇಳಿದರು.
ಬಿವಿವಿ ಸಂಘದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ 15ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ತಂತ್ರಜ್ಞಾನದ ಸಹಾಯದಿಂದ ಗ್ರಾಮೀಣ ಪ್ರದೇಶದ ಜನರ ಆರೋಗ್ಯ, ನೈರ್ಮಲ್ಯ, ನೀರಿನ ಗುಣಮಟ್ಟ ಸುಧಾರಿಸಿ ಉತ್ತಮ ಜೀವನಮಟ್ಟ ಕಲ್ಪಿಸುವಂತೆ ಮಾಡಬೇಕು ಎಂದರು.
ಪ್ರಧಾನಮಂತ್ರಿಗಳ ವಿಕಸಿತ ಭಾರತದ ಪರಿಕಲ್ಪನೆ ಧ್ಯೇಯದಲ್ಲಿ ಕ್ವಾಂಟಮ್, ಸೆಮಿಕಂಡಕ್ಟರ್, ಬಾಹ್ಯಾಕಾಶ, ರಕ್ಷಣೆ, ಎಐ, ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಸ್ವಸಾಮರ್ಥ್ಯ ವೃದ್ಧಿಸಿಕೊಂಡು, ಆಮದನ್ನು ಕಡಿತಗೊಳಿಸಿ, ಜಾಗತಿಕ ನಾಯಕತ್ವ ಸಾಧಿಸುವಂತೆ ಪ್ರಯತ್ನಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಪದವಿಯು ಒಂದು ಜವಾಬ್ದಾರಿಯಾಗಿದ್ದು, ಸಮಾಜದ ಸಮಸ್ಯೆಗಳಿಗೆ ಉತ್ತಮ ತಾಂತ್ರಿಕ ಪರಿಹಾರ ನೀಡುವುದು ಮುಖ್ಯ. ವಿಕಸಿತ ಭಾರತದ ಪರಿಕಲ್ಪನೆ ಸಾಕಾರಗೊಳಿಸುವಲ್ಲಿ ಯುವ ಎಂಜಿನಿಯರುಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಬದಲಾವಣೆಗಳಿಗೆ ಹೊಂದಿಕೊಳ್ಳುತ್ತ ನಿರಂತರ ಕಲಿಕೆ ಮೂಲಕ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಬೇಕು ಎಂದು ಹಾರೈಸಿದರು.
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ತಾಂತ್ರಿಕ ಶಿಕ್ಷಣದ ನಿರ್ದೇಶಕ ಆರ್.ಎನ್. ಹೆರಕಲ್, ಪ್ರಾಚಾರ್ಯ ಬಿ.ಆರ್.ಹಿರೇಮಠ, ಪರೀಕ್ಷಾ ನಿಯಂತ್ರಣಾಧಿಕಾರಿ ಕೆ. ಚಂದ್ರಶೇಖರ ಇದ್ದರು.
ಐಐಟಿ ಮದ್ರಾಸಿನ ಪ್ರಾಧ್ಯಾಪಕ ಜಿ.ಆರ್.ದೊಡಗೌಡರ, ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಸಿ.ವಿ.ಕೋಟಿ, ರುದ್ರಣ್ಣ ಅಕ್ಕಿಮರಡಿ, ಕುಮಾರ ಯಳ್ಳಿಗುತ್ತಿ, ವಿವಿಧ ಕಾಲೇಜಿ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಸಜ್ಜನ, ಕುಮಾರಸ್ವಾಮಿ ಹಿರೇಮಠ, ಗುರುಬಸವ ಸೂಳಿಭಾವಿ, ಮಹೇಶ ಕಕರಡ್ಡಿ ಇದ್ದರು.
ಪದವಿ ಪ್ರದಾನ
2023-24 ಸಾಲಿನಲ್ಲಿ ಬಿಇ ಪದವಿಯ 11 ವಿಭಾಗಗಳ 660 ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ವಿಭಾಗದ 57 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 717 ಪದವಿ ಪ್ರದಾನ ಮಾಡಲಾಯಿತು. 13 ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕಿನೊಂದಿಗೆ 16 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.