ADVERTISEMENT

ಅಮೀನಗಡ | ಬಿಡಿಸಿಸಿ ಬ್ಯಾಂಕ್ ಹಗರಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಮೇ 2024, 15:38 IST
Last Updated 27 ಮೇ 2024, 15:38 IST
ಅಮೀನಗಡ ಪಟ್ಟಣದ ಬಿಡಿಸಿಸಿ ಬ್ಯಾಂಕ್ ಎದುರು ರೈತರು ಹಾಗೂ ಗ್ರಾಹಕರು ಧರಣಿ ನಡೆಸಿ ಸಹಕಾರಿ ಬ್ಯಾಂಕ್‌ನ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು
ಅಮೀನಗಡ ಪಟ್ಟಣದ ಬಿಡಿಸಿಸಿ ಬ್ಯಾಂಕ್ ಎದುರು ರೈತರು ಹಾಗೂ ಗ್ರಾಹಕರು ಧರಣಿ ನಡೆಸಿ ಸಹಕಾರಿ ಬ್ಯಾಂಕ್‌ನ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು   

ಅಮೀನಗಡ: ಬಿಡಿಸಿಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯ ನೆಪದಲ್ಲಿ ಅಮಾಯಕ ರೈತರು ಹಾಗೂ ಗ್ರಾಹಕರಿಗೆ ಕಿರುಕುಳ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಳೇಭಾವಿ ಹಾಗೂ ಅಮೀನಗಡದ ರೈತರು ಹಾಗೂ ಗ್ರಾಹಕರು ಪಟ್ಟಣದ ಬಿಡಿಸಿಸಿ ಬ್ಯಾಂಕ್ ಎದುರು ಸೋಮವಾರ ಧರಣಿ ನಡೆಸಿದರು.

2022ರಲ್ಲಿ ಅಮೀನಗಡದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿಯಿಂದಲೇ ಕೋಟಿಗಟ್ಟಲೆ ಅವ್ಯವಹಾರವಾಗಿದ್ದು ತನಿಖೆ ನಡೆಯುತ್ತಿದೆ. ಆದರೆ ತನಿಖೆ ನೆಪದಲ್ಲಿ ಕೆಲ ಅಮಾಯಕ ರೈತರು ಹಾಗೂ ಗ್ರಾಹಕರಿಗೆ ನೋಟಿಸ್ ನೀಡಿ ಕಿರುಕುಳ ನೀಡಲಾಗುತ್ತಿದೆ. ಅವ್ಯವಹಾರ ಮಾಡಿದ ಸಿಬ್ಬಂದಿಯನ್ನು ವಿಚಾರಿಸದರೆ ಸತ್ಯ ಗೊತಾಗುತ್ತದೆ ಎಂದ ಧರಣಿ ನಿರತ ರೈತರು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಆಡಳಿತ ಮಂಡಳಿ ಅಧ್ಯಕ್ಷ ಅಥವಾ ಪ್ರಧಾನ ವ್ಯವಸ್ಥಾಪಕ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವ ಭರವಸೆ ನೀಡಬೇಕು ಹಾಗೂ ರೈತರಿಗೆ ನೀಡಿದ ನೋಟೀಸ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಸ್ಥಳಕ್ಕೆ ಬಂದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಪೂಜಾರಿ ಧರಣಿ ನಿರತರಿಂದ ಮನವಿ ಸ್ವೀಕರಿಸಿ, ‘ಚುನಾವಣಾ ನೀತಿ ಸಂಹಿತೆ ಜಾರಿ ಮುಗಿದ ನಂತರ ಆಡಳಿತ ಮಂಡಳಿ ಅಧ್ಯಕ್ಷರೊಂದಿಗೆ ತಮ್ಮ ಸಮಸ್ಯೆ ಕುರಿತು ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಧರಣಿ ನಿರತ ರೈತರು ಹಾಗೂ ಗ್ರಾಹಕರು ಧರಣಿ ಹಿಂಪಡೆದರು.

ಮುಖಂಡರಾದ ನಾಗೇಶ ಗಂಜಿಹಾಳ, ದೇವರಾಜ ಕಮತಗಿ, ಸುರೇಶ ಗಂಜಿಹಾಳ,ಬಿ. ಎಚ್. ಬೆಲ್ಲದ, ಆನಂದ ಮೋಕಾಶಿ,ಎಸ್. ಎಸ್. ಪರಾಳದ, ಎಸ್. ಜಿ. ಪರಾಳದ ಸೇರಿದಂತೆ ರೈತರು ಹಾಗೂ ಗ್ರಾಹಕರು ಇದ್ದರು.

ಅಮೀನಗಡ  ಬಿಡಿಸಿಸಿ ಬ್ಯಾಂಕ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಮಾಯಕ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ರೈತರು ಬ್ಯಾಂಕ್ ಎದುರು ಸೋಮವಾರ ಧರಣಿ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.