
ಅಮೀನಗಡ: ಪ್ರತಿ ವರ್ಷ ಸಮೀಪದ ಸಿದ್ದನಕೊಳ್ಳದಲ್ಲಿ ನಡೆಯುವ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೊಡಮಾಡುವ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಬಹುಭಾಷಾ ನಟಿ , ಕಲಾವಿದೆ ಭಾರತಿ ವಿಷ್ಣುವರ್ಧನ್ ಹಾಗೂ ಸಿದ್ದಶ್ರೀ ರಾಜ್ಯ ಪ್ರಶಸ್ತಿಯನ್ನು ರಂಗಭೂಮಿ ಹಿರಿಯ ಕಲಾವಿದೆ ಮಾಲತಿ ಸುಧೀರ್ ಅವರಿಗೆ ಪ್ರದಾನ ಮಾಡಲಾಯಿತು.
ಸಮೀಪದ ಸಿದ್ಧನಕೊಳ್ಳದಲ್ಲಿ ಗುರುವಾರ ನಡೆದ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಶ್ರೀಮಠದ ಧರ್ಮಾಧಿಕಾರಿ ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿಯು ₹ 50 ಸಾವಿರ ನಗದು ಹೊಂದಿದೆ.
ಸಿದ್ದಶ್ರೀ ರಾಜ್ಯ ಪ್ರಶಸ್ತಿ: ಹಿರಿಯ ರಂಗ ಕಲಾವಿದೆ ಮಾಲತಿ ಸುಧೀರ ಅವರಿಗೆ ಈ ಬಾರಿಯ ಸಿದ್ದಶ್ರೀ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ₹ 25 ಸಾವಿರ ನಗದು ಹೊಂದಿದೆ.
ಈ ಸಂದರ್ಭದಲ್ಲಿ ಕೀರ್ತಿ ಅನಿರುದ್ಧ, ಪ್ರಿಯಾ ಸವದಿ ಇದ್ದರು.
ಇಳಕಲ್ ಸೀರೆ ಉಡುಗೊರೆ: ಪ್ರಶಸ್ತಿ ಪುರಸ್ಕೃತರಾದ ಭಾರತಿ ವಿಷ್ಣುವರ್ಧನ್ ಹಾಗೂ ಮಾಲತಿ ಸುಧೀರ್ ಅವರಿಗೆ ಇಳಕಲ್ ಸೀರೆಯನ್ನು ಪ್ರಶಸ್ತಿಯೊಂದಿಗೆ ಉಡುಗೊರೆಯಾಗಿ ನೀಡಲಾಯಿತು
ಕಲಾವಿದರ ಪೋಷಕ ಮಠ
ಸಿದ್ದಿ ಪುರುಷರ ಆಧ್ಯಾತ್ಮಿಕ ತಾಣವಾದ ಸಿದ್ದನಕೊಳ್ಳ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಶಸ್ತಿ ಸ್ವೀಕರಿಸಿರುವುದು ಸಂತಸ ತಂದಿದೆ. ಈ ಪ್ರಶಸ್ತಿ ವಿಷ್ಣುವರ್ಧನ್ ಅವರಿಗೆ ಸಲ್ಲಬೇಕು. ಕಲಾವಿದರ ಪೋಷಕ ಮಠವಾದ ಶ್ರೀ ಮಠದ ಕಾರ್ಯ ನಿರಂತರವಾಗಿರಲಿ. ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಈ ಮಠದ ಪರಂಪರೆ ನಾಡಿನ ಹೆಮ್ಮೆ ಎಂದು ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.
ಉತ್ತರ ಕರ್ನಾಟಕದ ಯುವ ಕಲಾವಿದರಿಗೆ ಸಿದ್ದನಕೊಳ್ಳದ ಶ್ರೀಮಠ ವೇದಿಕೆ ಕಲ್ಪಿಸಿ ಪೋಷಿಸುತ್ತಿರುವ ಕಾರ್ಯ ಶ್ಲಾಘನೀಯ–ಮಾಲತಿ ಸುಧೀರ್, ಪ್ರಶಸ್ತಿ ಪುರಸ್ಕೃತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.