ಬೀಳಗಿ ಪಟ್ಟಣದ ಅಂಬೇಡ್ಕರ ನಗರದ ಕಾಲೋನಿಯಲ್ಲಿ ಅತಿಯಾದ ಮಳೆಯಾಗಿದ್ದರ ಪರಿಣಾಮ ರಾತ್ರಿ ವೇಳೆಯಲ್ಲಿ ಮನೆಗಳಿಗೆ ನುಗ್ಗಿದ ಸ್ಥಳಗಳನ್ನು ಶಾಸಕ ಜೆ.ಟಿ.ಪಾಟೀಲ ವಿಕ್ಷಣೆ ಮಾಡಿದರು.
ಬೀಳಗಿ: ತಾಲ್ಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಬಹಳಷ್ಟು ಮನೆ ಮತ್ತು ಜಮೀನುಗಳಿಗೆ ನೀರು ಹರಿದ ಪರಿಣಾಮವಾಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಹಾನಿಗೊಳಗಾದ ಬೆಳೆ ಮತ್ತು ಮನೆಗಳ ಸಮಗ್ರ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಹೆಚ್ಚಿನ ಮಳೆಯಿಂದಾಗಿ ಧರೆಗುಳಿದ ಮನೆಗಳನ್ನು ಸೋಮವಾರ ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಾಂತ 7.3 ಎಂ ಎಂ. ಮಳೆಯಾಗಬೇಕಾಗಿತ್ತು. ಆದರೆ ಹೆಚ್ಚು ಮಳೆಯಾಗಿದೆ. ಇದರಿಂದ ಕೃಷಿಕರ ಬೆಳೆಗಳು ಅಪಾರ ಹಾನಿಯಾಗಿವೆ. ಪಟ್ಟಣದಲ್ಲಿ 50 ಮನೆಗಳಿಗೆ ಮಳೆ ನೀರು ನುಗ್ಗಿರುವುದರಿಂದ ಇಡೀ ರಾತ್ರಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿನ ಮನೆ ಮತ್ತು ಜಮೀನುಗಳಲ್ಲಿ ಹಾನಿಯಾದ ಮಾಹಿತಿಯನ್ನು ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಪಡೆದುಕೊಳ್ಳಬೇಕು. ಪಟ್ಟಣದ ಅಂಬೇಡ್ಕರ ನಗರ ಸ್ಲಂ ಏರಿಯಾದ ಕೆಲವು ಮನೆಗಳು ಹಾಗೂ ತೋಳಮಟ್ಟಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದಲ್ಲದೇ ಸುನಗ ರೈತರು ರಾಸಿ ಮಾಡಿದ 40ಕ್ಕಿಂತ ಹೆಚ್ಚು ಚೀಲ ಸಜ್ಜೆ ಹಾಳಾಗಿದೆ ಎಂದು ತಿಳಿಸಿದರು.
ಬೀಳಗಿ ಪಟ್ಟಣ ಪಂಚಾಯತ ಮುಂಭಾಗದಲ್ಲಿರುವ ಚರಂಡಿಯಲ್ಲಿ ನೀರು ಹರಿಯುತ್ತಿದೆ. ಇದು ಅಂಬೇಡ್ಕರ ನಗರದ ಚರಂಡಿ ಮೂಲಕ ಹೊರಗೆ ಹೋಗುತ್ತಿದ್ದು. ಅಪಾರ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಅಲ್ಲಿಯ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ರಾತ್ರಿ ನೀರು ನುಗ್ಗಿದೆ.
ಪಟ್ಟಣ ಪಂಚಾಯತಿಯಿಂದ ಜಮಖಂಡಿ ಮಾರ್ಗವಾಗಿ ಹೋಗುವ ರಸ್ತೆಯ ಪಕ್ಕದ ಚರಂಡಿ ಸಣ್ಣ ಪ್ರಮಾಣದಲ್ಲಿ ಇರುವುದರಿಂದ ನೀರು ಹರಿಯಲು ತೊಂದರೆಯಾಗುತ್ತದೆ. ಕಾಲುವೆ ನಿರ್ಮಿಸಿದರೆ ಮಾತ್ರ ಈ ಸಮಸ್ಯೆಯಿಂದ ಹೊರಬರಲು ಸಾಧ್ಯ. ಇದಕ್ಕೆ ₹6.5ಕೋಟಿಯಷ್ಟು ಹಣ ಬೇಕಾಗಿದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ತಹಶೀಲ್ದಾರ ವಿನೋದ ಹತ್ತಳ್ಳಿ, ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಪಪಂ ಸದಸ್ಯ ಪಡಿಯಪ್ಪ ಕರಿಗಾರ, ಅಜ್ಜುಬಾಯಿ ಸರ್ಕಾರ, ಮಹಾದೇವ ಹಾದಿಮನಿ, ಪಪಂ ಮಾಜಿ ಅಧ್ಯಕ್ಷ ಅನಿಲ ಗಚ್ಚಿನಮನಿ, ಸಂಗಪ್ಪ ಕಂದಗಲ್ಲ. ಬಸವರಾಜ ಹಳ್ಳದಮನಿ, ಸಿದ್ದು ಸಾರವರಿ, ಸಂಗಪ್ಪ ಕಂದಗಲ್ಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.