
ಬಾಗಲಕೋಟೆ: ’ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಆನೆ ಬಲ ಬಂದಿದೆ. ಬಾಗಲಕೋಟೆಯಲ್ಲಿಯೂ ಎರಡೂ ಪಕ್ಷಗಳ ಸಮನ್ವಯ ಸಮಿತಿ ರಚಿಸಿಕೊಂಡು ಒಗ್ಗಟ್ಟಾಗಿ ಚುನಾವಣೆ ಎದುರಿಸಲಾಗುವುದು‘ ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಹೇಳಿದರು.
ಗುರುವಾರ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಜಿಲ್ಲೆಯಲ್ಲಿ ಪ್ರಬಲವಾಗಿರುವ ಬಿಜೆಪಿಯೊಂದಿಗೆ ಜೆಡಿಎಸ್ ಕೈಜೋಡಿಸಿರುವುದರಿಂದ ಗೆಲುವು ನಿಶ್ಚಿತವಾಗಿದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.
’20 ವರ್ಷಗಳಲ್ಲಿ ಮಾಡಿರುವ ಸಾಧನೆಗಳನ್ನು ಜನರಿಗೆ ಮನದಟ್ಟಾಗಿವೆ. ಜನತೆಗೂ ನಾನು ಏನು ಎನ್ನುವುದು ಗೊತ್ತಾಗಿದೆ. ಕೇಂದ್ರ ಸರ್ಕಾರದ ಸಾಧನೆಗಳು ಜನ ಸಾಮಾನ್ಯರಿಗೆ ತಲುಪಿವೆ‘ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ’ಶುಕ್ರವಾರ ಎರಡೂ ಪಕ್ಷಗಳ ಮುಖಂಡರು ಸಮನ್ವಯ ಸಮಿತಿ ಸಭೆ ನಡೆಸಲಿದ್ದೇವೆ. ಅಲ್ಲಿ ಪ್ರಚಾರದ ರೂಪರೇಷೆಗಳ ರಚಿಸಿಕೊಂಡು ಪ್ರಚಾರಕ್ಕೆ ಇಳಿಯಲಿದ್ದೇವೆ‘ ಎಂದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿ, ‘ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಲಾಗುವುದು. ಎನ್‌ಡಿಎ ಅಭ್ಯರ್ಥಿ ಗದ್ದಿಗೌಡರ ಅವರನ್ನು ಗೆಲ್ಲಿಸಲಿದ್ದೇವೆ’ ಎಂದು ಹೇಳಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬರುವವರನ್ನು ಸೇರಿಸಿಕೊಳ್ಳುತ್ತೇವೆ ಎಂದರು.
ಮುಖಂಡರಾದ ಬಸವರಾಜ ಯಂಕಂಚಿ, ರಾಜು ನಾಯ್ಕರ್, ಬಿ.ಪಿ. ಹಳ್ಳೂರ, ಚಂದ್ರಕಾಂತ ಶೇಖಾ, ಸಲೀಂ ಮೋಮಿನ್, ಕೃಷ್ಣಾ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.