
ಸಚಿವ ಆರ್.ಬಿ. ತಿಮ್ಮಾಪುರ
ಬಾಗಲಕೋಟೆ: ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಅಬಕಾರಿ ಸಚಿವ ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಫೆ.7ರಂದು ಬೆಳಿಗ್ಗೆ 11 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ಲಂಚದ ರೇಟ್ ಫಿಕ್ಸ್ ಮಾಡಲಾಗಿದೆ. ಇಲಾಖೆಯಿಂದ ಪ್ರತಿ ತಿಂಗಳೂ ಲಂಚ ಸಂಗ್ರಹ ಮಾಡಲಾಗುತ್ತಿದೆ. ಲಕ್ಷ್ಮಿನಾರಾಯಣ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆದ್ದರಿಂದ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಮದ್ಯದ 14ಸಾವಿರಕ್ಕೂ ಹೆಚ್ಚು ಮದ್ಯ ಮಾರಾಟ ಮಳಿಗೆಗಳಿದ್ದು, ಇಷ್ಟು ಸಂಖ್ಯೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ ಇಲ್ಲವಾಗಿವೆ. ಇಲಾಖೆಯಲ್ಲಿ ಕೈಬಿಸಿ ಮಾಡದಿದ್ದರೆ, ಯಾವುದೇ ಕೆಲಸಗಳು ಆಗುವುದಿಲ್ಲ. ಮದ್ಯದಂಗಡಿಯ ಮಾಲೀಕರು ಲಂಚ ನೀಡದಿದ್ದರೆ, ವಿವಿಧ ಕಾರಣದ ನೆಪವೊಡ್ಡಿ ಕಿರುಕುಳ ಕೊಡಲಾಗುತ್ತಿದೆ. ಸಚಿವ ತಿಮ್ಮಾಪುರ ರಕ್ಷಣೆಗೆ ಮುಖ್ಯಮಂತ್ರಿ ನಿಂತಿರುವುದನ್ನು ನೋಡಿದರೆ ಹಗರಣದಲ್ಲಿ ಅವರ ಪಾತ್ರವೂ ಇರಬಹುದು ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಖ್ಯಮಂತ್ರಿ ಮುಡಾ ಹಗರಣದಲ್ಲಿ ನಿವೇಶನಗಳನ್ನು ವಾಪಸ್ ನೀಡಿದರು. ಈಗ ಅಬಕಾರಿ ಹಗರಣ ಬೆಳಕಿಗೆ ಬಂದಿದೆ. ಅಬಕಾರಿ ಇಲಾಖೆಯಲ್ಲಿ ಐದಾರು ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ರಾಜ್ಯದಲ್ಲಿ ಕೈ ಸರ್ಕಾರ ಪಂಚ ಗ್ಯಾರಂಟಿಯ ಜೊತೆಗೆ ಮನೆ ಮನೆ ಮದ್ಯ ಮಾರಾಟದ 6ನೇ ಗ್ಯಾರಂಟಿ ಜಾರಿ ಮಾಡಿದೆ ಎಂದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಅಬಕಾರಿ ಇಲಾಖೆ ಕರ್ಮಕಾಂಡದ ದೊಡ್ಡ ಮಾಫಿಯಾದಿಂದ ಇಡೀ ರಾಜ್ಯ ಸುಡುತ್ತಿದೆ. ಸಚಿವರ ರಾಜೀನಾಮೆಗೆ ಆಗ್ರಹಿಸಿ ಸದನದ ಒಳಗೆ ಆಹೋರಾತ್ರಿ ಧರಣಿ ನಡೆಸಿದ್ದಾರೆ. ಇದೀಗ ಸದನದ ಹೊರಗಡೆ ಬಿಜೆಪಿ ಪ್ರತಿಭಟನೆ ನಡೆಸುತ್ತದೆ. ಕೂಡಲೇ ಸಚಿವ ತಿಮ್ಮಾಪುರ ಅವರು ರಾಜೀನಾಮೆ ನೀಡಬೇಕು. ಹಗರಣದ ಕುರಿತು ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಭ್ರಷ್ಟಾಚಾರ ಯಾರು ಮಾಡಿದರೂ ಭ್ರಷ್ಟಾಚಾರವೇ. ಅದರಲ್ಲಿ ಜಾತಿ ತರುವುದು ಸರಿಯಲ್ಲ.. ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಇಸ್ಟೀಟ್ ಕ್ಲಬ್‍ಗಳು ತಲೆಎತ್ತಿವೆ. ಕಳ್ಳತನ ಜಾಸ್ತಿಯಾಗಿದೆ. ಡ್ರಗ್ಸ್‌ಗೆ ಯುವಜನರು ಬಲಿಯಾಗುತ್ತಿದ್ದು, ಅದನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿ ಜಗದೀಶ್ ಮಾತನಾಡಿರುವ ಆಡಿಯೊ ಇದೆ. ಆದರೂ ಇಡೀ ಸರ್ಕಾರ ಸಚಿವ ತಿಮ್ಮಾಪುರ ಪರವಾಗಿ ನಿಂತಿರುವುದನ್ನು ನೋಡಿದರೆ ಸತ್ಯ ಮುಚ್ಚಿಹಾಕುವ ಕೆಲಸ ನಡೆದಿದೆ. ರಾಜ್ಯದಲ್ಲಿ ಮದ್ಯದ ಅಮಲು ಜಾಸ್ತಿಯಾಗಿದೆ ಎಂದು ದೂರಿದರು.
ಮುಖಂಡರಾದ ರಾಜು ನಾಯ್ಕರ್, ಮಲ್ಲಯ್ಯ ಮೂಗನೂರಮಠ, ಸತ್ಯನಾರಾಯಣ ಹೇಮಾದ್ರಿ, ಶಿವಾನಂದ ಸುರಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.