
ಬಾಗಲಕೋಟೆ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ನಿಂತು ಹೋಗಿಲ್ಲ. ವಿರೋಧ ಪಕ್ಷ. ಆಡಳಿತದಲ್ಲಿನ ಲೋಪಗಳನ್ನು ಎತ್ತಿ ತೋರಿಸಲಾಗದಷ್ಟು ಶಕ್ತಿಹೀನವಾಗಿದೆ’ ಎಂದು ಶಾಸಕ ಲಕ್ಷ್ಮಣ ಸವದಿ ಟೀಕಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮಗೆ ಮನೆಯೊಂದು ಮೂರು ಬಾಗಿಲು ಎನ್ನುತ್ತಾರೆ. ಆದರೆ, ಅವರದ್ದು ಮನೆಯೊಂದು ಐದು ಬಾಗಿಲು ಆಗಿದೆ. ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಅವರ ಹಿಂದಿನ ಐದು ವರ್ಷದ ಆಡಳಿತದಲ್ಲಿ ಏನಾಗಿತ್ತು ಎಂದು ನೋಡಿಕೊಳ್ಳಲಿ’ ಎಂದರು.
ಖುರ್ಚಿ ಕಿತ್ತಾಟದಲ್ಲಿ ರಾಜ್ಯದ ರೈತರನ್ನು ಮರೆತಿದ್ದಾರೆ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸವದಿ, ‘ಬಿಜೆಪಿಯವರಿಗೆ ಆರೋಪ ಮಾಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲ. ರಾಜ್ಯದಲ್ಲಿ ಕಬ್ಬಿನ ಸಮಸ್ಯೆ ಉಂಟಾಗಿತ್ತು. ಪ್ರತಿ ವರ್ಷವೂ ಹೋರಾಟ ಆಗುತ್ತಿದೆ. ಮುಖ್ಯಮಂತ್ರಿ ಅವರು ಕಾರ್ಖಾನೆಯವರು ಹಾಗೂ ರೈತರನ್ನು ಕರೆದು ಸಂಧಾನ ಮಾಡಿ ಟನ್ ಕಬ್ಬಿಗೆ ಕಾರ್ಖಾನೆಯಿಂದ ₹3,250 ಹಾಗೂ ಸರ್ಕಾರದಿಂದ ₹50ರೂ ಕೊಡಬೇಕೆಂದು ತೀರ್ಮಾನ ಮಾಡಿ ಸಮಸ್ಯೆಯನ್ನು ಬಗೆಹರಿಸಿದರು. ಕೇಂದ್ರ ಎಫ್ಆರ್‌ಪಿ ದರ ಹೆಚ್ಚಿಸಲಿ’ ಎಂದು ಆಗ್ರಹಿಸಿದರು.
‘ಮೆಕ್ಕೆಜೋಳ ಖರೀದಿ ಮಾಡಲು ಈಗಾಗಲೇ ಸೂಚನೆ ನೀಡಿದ್ದಾರೆ. ಇನ್ನೆರೆಡು ದಿನಗಳಲ್ಲಿ ಖರೀದಿ ಕೇಂದ್ರಗಳು ಆರಂಭಗವಾಗುತ್ತವೆ’ ಎಂದು ತಿಳಿಸಿದರು.
‘ನಮ್ಮ ಪಕ್ಷದಲ್ಲೂ ಹೈಕಮಾಂಡ್ ಇದೆ. ಬಿಜೆಪಿಯಲ್ಲೂ ಹೈಕಮಾಂಡ್ ಇದೆ. ಹೈಕಮಾಂಡ್ ನಿರ್ದೇಶನವನ್ನು ಆ ಪಕ್ಷದವರು ಯಾವ ರೀತಿ ಅನುಸರಿಸುತ್ತಿದ್ದಾರೆ. ನಮ್ಮಲ್ಲಿ ಪಾಲನೆ ಮಾಡಿದರೆ, ಬಿಜೆಪಿಯಲ್ಲಿ ಹೈಕಮಾಂಡ್ ನಿರ್ದೇಶನ ನೀಡಿದರೂ ಉಚ್ಚಾಟನೆ ಮಾಡುವ ಹಂತಕ್ಕೆ ಹೋಗಿರುತ್ತದೆ’ ಎಂದು ಟೀಕಿಸಿದರು.
‘ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಡದೇ ಇದ್ದರೆ ಅವರು ಬಿಜೆಪಿ ಜೊತೆ ಕೈಜೋಡಿಸುತ್ತಾರೆ ಎನ್ನುವುದು ಸುಳ್ಳು. ನನ್ನ ರಕ್ತದಲ್ಲಿ ಕಾಂಗ್ರೆಸ್ ಇದೆ. ಜೀವನ ಪರ್ಯಂತ ಕಾಂಗ್ರೆಸ್‌ನಲ್ಲೆ ಇರುತ್ತೇನೆ’ ಎಂದು ಡಿಕೆಶಿ ಅವರೇ ಹೇಳಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.