ADVERTISEMENT

ಯುದ್ಧ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಡಿಸಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 15:29 IST
Last Updated 12 ನವೆಂಬರ್ 2019, 15:29 IST
ಬಾಗಲಕೋಟೆಯ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಸೈನಿಕ ಮಂಡಳಿ ಸಭೆ ನಡೆಯಿತು.
ಬಾಗಲಕೋಟೆಯ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಸೈನಿಕ ಮಂಡಳಿ ಸಭೆ ನಡೆಯಿತು.   

ಬಾಗಲಕೋಟೆ: ‘ಭಾರತೀಯ ಸೇನೆಯ ಯೋಧರ ಗೌರವಾರ್ಥಜಿಲ್ಲೆಯಲ್ಲಿ ಯುದ್ಧ ಸ್ಮಾರಕ ನಿರ್ಮಿಸಲು ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿಸೋಮವಾರ ನಡೆದ ಜಿಲ್ಲಾ ಸೈನಿಕ ಕಲ್ಯಾಣ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಯುದ್ಧ ಸ್ಮಾರಕ ನಿರ್ಮಾಣ ಸೇರಿದಂತೆ ಮಾಜಿ ಸೈನಿಕರನ್ನು ಸನ್ಮಾನಿಸುವುದು ಮತ್ತು ಜಿಲ್ಲೆಯಲ್ಲಿ ಇಸಿಎಚ್‌ಎಸ್ ಪಾಲಿಕ್ಲಿನಿಕ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು’ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

‘ಮಾಜಿ ಸೈನಿಕರಿಗೆ ವಿಧಿಸುತ್ತಿರುವ ಸೇವಾ ಶುಲ್ಕ, ಗ್ರಾಮ ಪಂಚಾಯ್ತಿಗಳಲ್ಲಿ ವಿಧಿಸುತ್ತಿರುವ ಮನೆ ಕರದ ಶೇ 50 ರಷ್ಟು ಶುಲ್ಕ ರಿಯಾಯಿತಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿನ ಸಿಬ್ಬಂದಿಗಳ ನೇಮಕಾತಿ ಹಾಗೂಅನುಕಂಪ ಆಧಾರದ ನೇಮಕಾತಿ ವಿಚಾರಗಳನ್ನು ಕೇಂದ್ರ ಕಚೇರಿಯ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು’ ಎಂದರು.

ADVERTISEMENT

‘ಮಾಜಿ ಸೈನಿಕರಿಗೆ ಆದಾಯ ಮಿತಿ ₹ 5 ಲಕ್ಷಕ್ಕೆ ಏರಿಸುವುದು, ಆಶ್ರಯ ಮನೆಗಳ ಹಂಚಿಕೆ ಮತ್ತು ಮಾಜಿ ಸೈನಿಕರ ಮಕ್ಕಳಿಗೆ ಶಿಕ್ಷಣದಲ್ಲಿ ನೀಡುತ್ತಿರುವ ಮೀಸಲಾತಿ ಹೆಚ್ಚಿಸುವ ವಿಚಾರವನ್ನು ರಾಜ್ಯ ಸೈನಿಕ ಮಂಡಳಿ ಸಭೆಯಲ್ಲಿ ಮಂಡಿಸಬೇಕು’ ಎಂದು ಜಿಲ್ಲೆಯ ಮಾಜಿ ಸೈನಿಕರ ಸಂಘದ ಅಧ್ಯಕ್ಷರಿಗೆ ತಿಳಿಸಿದರು.

ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ರಮೇಶ ಜಗಾಪುರ ಸೈನಿಕರ ಕುಂದು ಕೊರತೆಗಳ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.

ಜಿಲ್ಲಾ ಮಾಜಿ ಸೈನಿಕ ಸಂಘದ ಅಧ್ಯಕ್ಷ ರಾಮಪ್ಪ ಯಡಹಳ್ಳಿ, ಮಾಜಿ ಅಧ್ಯಕ್ಷ ಕಾಂಬಳೆ, ಕಾರ್ಯದರ್ಶಿ ಎಚ್.ಆರ್.ಕುಲಕರ್ಣಿ ಉಪಸ್ಥಿತರಿದ್ದರು.

ಪ್ರೊಬೆಷನರಿ ಐಎಎಸ್ ಅಧಿಕಾರಿ ಗರಿಮಾ ಪನ್ವಾರ, ಜಿಲ್ಲಾ ಸೈನಿಕ ಮಂಡಳಿ ಉಪಾಧ್ಯಕ್ಷ ಮೇಜರ್ ಅಪ್ಪಾಸಾಹೇಬ್ ನಿಂಬಾಳಕರ, ಸದಸ್ಯರಾದ ಅಹಮ್ಮದ ರಸೂಲ್ ದಾಂಡಿಯಾ, ಕ್ಯಾಪ್ಟನ್ ಅರ್ಜುನ ಕೋರಿ, ಎಸ್.ಬಿ.ಕರಣಿ, ವಿಠ್ಠಲ ಗೋವಿಂದಪ್ಪನವರ ಸೇರಿದಂತೆ ಸೈನಿಕ ಇಲಾಖೆಯ ಎಂ.ಎಸ್.ಬಬಲಾದಿಮಠ, ಪಾಂಡುರಂಗ ಬ್ಯಾಳಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.