ADVERTISEMENT

ಬಾಗಲಕೋಟೆ| ಮಹಿಳೆಯರಿಗೆ ಶಕ್ತಿ; ವಿದ್ಯಾರ್ಥಿಗಳಿಗೆ ಸಂಕಷ್ಟ

ಶಕ್ತಿ ಯೋಜನೆ ನಂತರ ನಿತ್ಯ 1 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 4:58 IST
Last Updated 10 ಜುಲೈ 2023, 4:58 IST
ಬಾಗಲಕೋಟೆಯಲ್ಲಿ ಬಸ್‌ ಹತ್ತಲು ಮುಗಿಬಿದ್ದಿರುವ ಮಹಿಳೆಯರು
ಬಾಗಲಕೋಟೆಯಲ್ಲಿ ಬಸ್‌ ಹತ್ತಲು ಮುಗಿಬಿದ್ದಿರುವ ಮಹಿಳೆಯರು   

ಬಸವರಾಜ ಹವಾಲ್ದಾರ

ಬಾಗಲಕೋಟೆ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ’ ಯೋಜನೆ ಜಾರಿಗೆ ತಂದಿರುವ ಪರಿಣಾಮ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. 

ಉಚಿತ ಪ್ರಯಾಣದಿಂದ ಮಹಿಳೆಯರು ಖುಷಿಯಾಗಿದ್ದರೆ, ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ–ಕಾಲೇಜಿಗೆ ಹೋಗಲಾರದೆ ಪರದಾಡುತ್ತಿದ್ದಾರೆ.

ADVERTISEMENT

ಶಕ್ತಿ ಯೋಜನೆ ಜಾರಿಗೆ ತಂದ ಮೇಲೆ ಜಿಲ್ಲೆಯಲ್ಲಿ ನಿತ್ಯ ಪ್ರಯಾಣಿಕರ ಸಂಖ್ಯೆ ಒಂದು ಲಕ್ಷದಷ್ಟು ಹೆಚ್ಚಾಗಿದೆ. ಇದರಿಂದಾಗಿ ಬಹುತೇಕ ಬಸ್‌ಗಳು ತುಂಬಿ ತುಳುಕುತ್ತಿವೆ. ಸೀಟುಗಳು ಭರ್ತಿಯಾಗಿ ನಿಂತುಕೊಂಡು ಹೋಗುವುದು ಸಾಮಾನ್ಯವಾಗಿದೆ. 

ಬಾಗಲಕೋಟೆ ವಿಭಾಗದಲ್ಲಿ 670 ಬಸ್‌ಗಳಿವೆ. ಪ್ರತಿ ನಿತ್ಯ 1.70 ಲಕ್ಷ ಜನರು ಬಸ್‌ಗಳಲ್ಲಿ ಸಂಚರಿಸುತ್ತಿದ್ದರು. ಆ ಪೈಕಿ ಶೇ 35ರಿಂದ 45ರಷ್ಟು ಮಹಿಳೆಯರು ಇರುತ್ತಿದ್ದರು. ಶಕ್ತಿ ಯೋಜನೆ ಜಾರಿಯ ನಂತರ ಪ್ರಯಾಣಿಕರ ಸಂಖ್ಯೆ 2.60 ರಿಂದ 2.80ಲಕ್ಷಕ್ಕೆ ಹೆಚ್ಚಾಗಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ 60ಕ್ಕೂ ಹೆಚ್ಚಿದೆ.

ನಿತ್ಯ ₹70 ರಿಂದ 75 ಲಕ್ಷ ಆದಾಯ ಸಂಗ್ರಹವಾಗುತ್ತಿತ್ತು. ಈಗ ಆದಾಯವು ₹2 ಕೋಟಿಗೆ ಹೆಚ್ಚಿದೆ. ಜುಲೈ 11ರಿಂದ 30ರವರೆಗೆ 30 ಲಕ್ಷ ಮಹಿಳೆಯರು, 29 ಲಕ್ಷ ಪುರುಷರು ಸಂಚರಿಸಿದ್ದಾರೆ. ಮಹಿಳೆಯರ ಪ್ರಯಾಣದ ಮೊತ್ತ ₹9.93 ಕೋಟಿಯಾಗಿದ್ದು, ಅದನ್ನು ಸರ್ಕಾರ ಭರಿಸಬೇಕಿದೆ.

ಶಕ್ತಿ ಯೋಜನೆಯ ಲಾಭ ಪಡೆಯಲು ಜಿಲ್ಲೆಯ ಪ್ರವಾಸಿ ತಾಣ, ನಗರಗಳಿಗೆ, ವಹಿವಾಟಿ ಬೇಟಿ ನೀಡುತ್ತಿರುವ ಬಹುತೇಕರು ಬೆಳಿಗ್ಗೆ ಹೊರಟು, ಸಂಜೆಯ ವೇಳೆಗೆ ಮನೆಗೆ ಸೇರುವ ಯೋಜನೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದೇ ವೇಳೆಗೆ ವಿದ್ಯಾರ್ಥಿಗಳು, ನೌಕರರು ಪ್ರಯಾಣ ಮಾಡುತ್ತಿರುವುದರಿಂದ ಪ್ರಯಾಣ ಪ್ರಯಾಸಕರವಾಗಿದೆ.

ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದರೂ ಆರಾಮಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ನಿಂತುಕೊಂಡೇ ಪ್ರಯಾಣ ಮಾಡಬೇಕಾದ ಸ್ಥಿತಿ ಇದೆ. ವಯಸ್ಸಾದವರು ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಹಣ ನೀಡಿ ಪ್ರಯಾಸುತ್ತಿರುವವರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅವರೂ ಪರದಾಡಬೇಕಾದ ಸ್ಥಿತಿ ಇದೆ.

ಬಾಗಲಕೋಟೆ ತಾಲ್ಲೂಕಿನ ಕೆರಕಲಮಟ್ಟಿಯಿಂದ ಬಾಗಲಕೋಟೆಗೆ ಬರುತ್ತಿದ್ದ ಬಸ್‌ನಲ್ಲಿ 110 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಸ್‌ ಏರಲು 40 ಮಂದಿ ಕಾಯುತ್ತಿದ್ದರು. ಟಿಕೆಟ್‌ ನೀಡುವುದೇ ಕಂಡಕ್ಟರ್‌ಗಳಿಗೆ ಸವಾಲಾಗಿದೆ. ಶೇ50ರಷ್ಟು ಸೀಟು ಪುರುಷರಿಗೆ ಮೀಸಲು ಎಂಬ ನಿಯಮ ಪಾಲನೆಯಾಗುತ್ತಿಲ್ಲ. ಸೀಟಿಗಾಗಿ ಬಸ್‌ಗಳಲ್ಲಿ ಜಗಳವಾಡುವುದು ಸಾಮಾನ್ಯವಾಗುತ್ತಿದೆ.

ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನಲೆಯಲ್ಲಿ ಇತ್ತೀಚೆಗೆ ಬೀಳಗಿ ಶಾಸಕ ಜೆ.ಟಿ. ಪಾಟೀಲ ಸಭೆ ಮಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಯಾವ, ಯಾವ ಗ್ರಾಮಗಳಿಗೆ ಹೊಸ ಬಸ್‌ಗಳನ್ನು ಓಡಿಸಬೇಕು ಎಂಬುದರ ಪಟ್ಟಿಯನ್ನೇ ನೀಡಿ ಅದನ್ನು ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಉಳಿದ ಶಾಸಕರದ್ದೂ ಇದೇ ಬೇಡಿಕೆಯಾಗಿದೆ.

ಈಗಾಗಲೇ ಲಭ್ಯವಿರುವ ಬಸ್‌ಗಳನ್ನು 647 ಮಾರ್ಗಗಳಲ್ಲಿ ಓಡಿಸಲಾಗುತ್ತಿದೆ. ಹೊಸ ಮಾರ್ಗಗಳಲ್ಲಿ ಓಡಿಸಲು ಹೊಸ ಬಸ್‌ಗಳಿಲ್ಲ. ಈಗಿರುವ ಮಾರ್ಗಗಳಲ್ಲಿಯೇ ಕೆಲವನ್ನು ರದ್ದು ಮಾಡಿ, ಓಡಿಸಬೇಕಾಗಿದೆ. ಸಿಬ್ಬಂದಿ ಕೊರತೆಯೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗವನ್ನು ಕಾಡುತ್ತಿದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಅಧಿಕಾರಿಗಳದ್ದಾಗಿದೆ.

ಬಾಗಲಕೋಟೆಯಲ್ಲಿ ಬಸ್‌ಗಾಗಿ ಕಾಯುತ್ತಿರುವ ಜನತೆ
ಬಸ್‌ಗಾಗಿ ಬಾಗಲಕೋಟೆ ಜಿಲ್ಲೆಯ ಚಿಮ್ಮಡದಲ್ಲಿ ನಡೆದ ಪ್ರತಿಭಟನೆ
ಮಧ್ಯಾಹ್ನದ ವೇಳೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದು
ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಹೊಸ ಬಸ್‌ಗಳಿಗೆ ಬೇಡಿಕೆ ಬಂದಿದೆ. ಹೊಸ ಬಸ್‌ಗಳಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದ್ದ ಬಸ್‌ ಗಳಲ್ಲಿಯೇ ಕೆಲವೆಡೆ ಬಸ್‌ ಓಡಿಸಲಾಗುವುದು. ನಿತಿನ್‌ ಹೆಗಡೆ ವಿಭಾಗೀಯ ನಿಯಂತ್ರಣ ಅಧಿಕಾರಿ ಎನ್‌ಡಬ್ಲುಆರ್‌ಟಿಸಿ ಬಾಗಲಕೋಟೆ
ನಿತಿನ್‌ ಹೆಗಡೆ ವಿಭಾಗೀಯ ನಿಯಂತ್ರಣ ಅಧಿಕಾರಿ ಎನ್‌ಡಬ್ಲುಆರ್‌ಟಿಸಿ ಬಾಗಲಕೋಟೆ

ಬಸ್‌ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ:

ಜಿಲ್ಲೆಯ ಜಮಖಂಡಿ ಮುಧೋಳ ತಾಲ್ಲೂಕಿನ ಲೋಕಾಪುರ ಬಾಗಲಕೋಟೆ ತಾಲ್ಲೂಕಿನ ಕೆರಕಲಮಟ್ಟಿ ಮಹಾಲಿಂಗಪುರ ಸಮೀಪದ ಚಿಮ್ಮಡ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಬಸ್‌ಗಳು ತುಂಬಿ ತುಳುಕುತ್ತಿದ್ದು ವಿದ್ಯಾರ್ಥಿಗಳಿಗೆ ಪ್ರಯಾಣಕ್ಕೆ ಸಾಧ್ಯವಾಗುತ್ತಿಲ್ಲ. ಬಸ್ ತುಂಬಿರುವುದರಿಂದ ಹಲವು ಕಡೆಗಳಲ್ಲಿ ಬಸ್‌ಗಳನ್ನು ನಿಲ್ಲಿಸದೆ ಹೋಗುತ್ತಿರುವುದರಿಂದ ಶಾಲಾ–ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶದಿಂದ ತಾಲ್ಲೂಕು ಕೇಂದ್ರಕ್ಕೆ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಅವರಿಗೆ ಈಗ ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಬಸ್‌ ಬರುತ್ತಿಲ್ಲ. ಇದರಿಂದಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಉಚಿತ ಪ್ರಯಾಣ ಆರಂಭಿಸುವ ಮೊದಲು ಶಾಲಾ–ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹೋಗುತ್ತಿದ್ದೆವು. ಈಗ ಬಸ್‌ ಗ್ರಾಮಕ್ಕೆ ಬರುವ ವೇಳೆಗೆ ಬಸ್‌ ತುಂಬಿರುತ್ತದೆ. ಬಸ್‌ ಹತ್ತಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಬಸ್ ನಿಲ್ಲಿಸದೆ ಹೋಗಿ ಬಿಡುತ್ತಾರೆ. ಇದರಿಂದ ತೊಂದರೆಯಾಗಿದೆ ಎಂದು ವಿದ್ಯಾರ್ಥಿ ಶಿವಕುಮಾರ ಬಸ್ಸಾಪುರ ದೂರಿದರು.

ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಳ : ಶಕ್ತಿ ಯೋಜನೆ ಜಾರಿಯ ನಂತರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಉಚಿತ ಪ್ರಯಾಣ ಸೌಲಭ್ಯದ ನಂತರ ಪ್ರವಾಸಿ ಸ್ಥಳಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಐಹೊಳೆ ಬಾದಾಮಿ ಪಟ್ಟದಕಲ್ಲು ಮಹಾಕೂಟ ಕೂಡಲಸಂಗಮ ಬನಶಂಕರಿ ಮಾರ್ಗದ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಜನರಿಲ್ಲದೆ ಬಿಕೊ ಎನ್ನುತ್ತಿದ್ದ ಕೆಲವು ಪ್ರವಾಸಿ ತಾಣಗಳು ಜನರಿಂದ ತುಂಬಿವೆ. ಬನಶಂಕರಿ ದೇವಿಯ ದರ್ಶನ ಪಡೆಯಲು ಜಿಲ್ಲೆಯವರು ಅಷ್ಟೇ ಅಲ್ಲದೆ ಬೇರೆ ಜಿಲ್ಲೆಗಳ ಜನರು ಬರುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.