ADVERTISEMENT

ಹುನಗುಂದ | ಜಾತಿಗಣತಿ ತರಬೇತಿ ಬಹಿಷ್ಕರಿಸಿದ ಪ್ರೌಢಶಾಲೆ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 3:05 IST
Last Updated 22 ಸೆಪ್ಟೆಂಬರ್ 2025, 3:05 IST
ತರಬೇತಿ ಬಹಿಷ್ಕರಿಸಿ ಹುನಗುಂದ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಭಾನುವಾರ ಶಿಕ್ಷಕರು ಜಮಾಯಿಸಿದ್ದರು
ತರಬೇತಿ ಬಹಿಷ್ಕರಿಸಿ ಹುನಗುಂದ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಭಾನುವಾರ ಶಿಕ್ಷಕರು ಜಮಾಯಿಸಿದ್ದರು   

ಹುನಗುಂದ: ಹುನಗುಂದ ಮತ್ತು ಇಳಕಲ್ ಪ್ರೌಢಶಾಲೆ ಸಹ ಶಿಕ್ಷಕರನ್ನು ಜಾತಿವಾ‌ರು ಸಮೀಕ್ಷೆಗೆ ನೇಮಕ ಮಾಡಿ, ಭಾನುವಾರವೇ ತರಬೇತಿಗೆ ಆದೇಶ ನೀಡಿದ್ದರಿಂದ ಶಿಕ್ಷಕರು ಗೊಂದಲಕ್ಕೆ ಒಳಗಾಗಿ ತರಬೇತಿ ಬಹಿಷ್ಕರಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಜಮಾಯಿಸಿದ ಘಟನೆ ನಡೆಯಿತು. 

ಪ್ರೌಢಶಾಲೆ ಸಹಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರನ್ನು ಗಣತಿದಾರರ ಕಾರ್ಯದಿಂದ ಕೈಬಿಟ್ಟು ಮೇಲ್ವಿಚಾರಕರಾಗಿ ನೇಮಿಸಬೇಕು ಎಂದು ಆಗ್ರಹಿಸಿ ಪ್ರೌಢಶಾಲೆ ಶಿಕ್ಷಕರರ ಸಂಘಟನೆ ವತಿಯಿಂದ ಗ್ರೇಡ್ –2 ತಹಶೀಲ್ದಾರ್ ಮಹೇಶ ಸಂದಿಗೌಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ ಮಟೂರ ಅವರಿಗೆ ಮನವಿ ಸಲ್ಲಿಸಲಾಯಿತು. 

‘ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರನ್ನು ಸಮೀಕ್ಷೆ ಕಾರ್ಯಕ್ಕೆ ನೇಮಿಸಲಾಗಿದೆ. ಇದು ನಮ್ಮ ಹುದ್ದೆಯ ಘನತೆಗೆ ಮುಜುಗರ ಉಂಟುಮಾಡುತ್ತಿದೆ. ಎಸ್ಎಸ್ಎಲ್‌ಸಿ ಅರ್ಧ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ತುರ್ತಾಗಿ ದಾಖಲು ಮಾಡಲು ಇಲಾಖೆ ಒತ್ತಡವಿದೆ’ ಎಂದು ಇಳಕಲ್ ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಸ್.ಅಡವಿ ಎಂದರು. 

ADVERTISEMENT

ಕೆಲಸದ ಒತ್ತಡ ಹೆಚ್ಚಳ

‘ಹುನಗುಂದ ತಾಲ್ಲೂಕಿನ 107 ಹಾಗೂ ಇಳಕಲ್ ತಾಲ್ಲೂಕಿನ 72 ಪ್ರೌಢಶಾಲೆ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನೇಮಿಸಲಾಗಿದೆ. ಆದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ ಸಮೀಕ್ಷೆ ಕಾರ್ಯಕ್ಕೆ ಅಗತ್ಯವಿದ್ದಷ್ಟು ಪ್ರಾಥಮಿಕ ಶಾಲಾ ಶಿಕ್ಷಕರು ಇರುವಾಗ ಪ್ರೌಢ ಶಾಲಾ ಬೋಧಕ ಸಿಬ್ಬಂದಿಯನ್ನು ನೇಮಕ ಮಾಡುವುದು ಏಕೆ? ವಿವಿಧ ಇಲಾಖೆ ಸಿಬ್ಬಂದಿಯನ್ನು ನೇಮಕ ಮಾಡಿದರೆ ಬಹುತೇಕ ಗಣತಿ ಕಾರ್ಯ ಪೂರ್ಣಗೊಳ್ಳುತ್ತದೆ. ಆದರೆ ಶೈಕ್ಷಣಿಕ ಕೆಲಸದ ಜೊತಗೆ ಈಗ ಗಣತಿ ಕಾರ್ಯಕ್ಕೆ ಪ್ರೌಢಶಾಲೆ ಭೋಧಕ ಸಿಬ್ಬಂದಿಯನ್ನು ನೇಮಕ ಮಾಡುವುದರಿಂದ ನೌಕರರ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ?’ ಎನ್ನುವುದು ಶಿಕ್ಷಕರ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.