ಬಾಗಲಕೋಟೆ: ‘ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯಬಾರ ವಹಿಸಿಕೊಂಡು ವೀರ, ಶೂರ, ತ್ಯಾಗಿಯಾಗಿ ವೈರಿಯ ಎದುರು ಶರಣಾಗದ ಸ್ವಾಭಿಮಾನಿಯಾಗಿ ಮೆರೆದವರು ಛತ್ರಪತಿ ಶಿವಾಜಿ’ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನವನಗರದ ಬಿ.ಆರ್. ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಆಳ್ವಿಕೆಯ ಪ್ರಥಮದಲ್ಲಿಯೇ ಸ್ಥಳೀಯ ಮಾವಳಿ ಸೈನ್ಯ ಕಟ್ಟಿಕೊಂಡು ತನಗೆ ಎದುರಾದ ಆದಿಲ್‌ಶಾಹಿ ಮುಂತಾದವರನ್ನು ಏಕಕಾಲಕ್ಕೆ ಎದುರಿಸಿ ವಿಜಯ ಸಾಧಿಸಿದವರು ಶಿವಾಜಿ. ತಾಯಂದಿರು ತಮ್ಮ ಮಕ್ಕಳಿಗೆ ಜೀಜಾಬಾಯಿಯಂತೆ ವೀರ, ಶೂರರ ಕಥೆಗಳನ್ನು ಹೇಳಿ ಮಕ್ಕಳನ್ನು ಶೌರ್ಯವಂತರನ್ನಾಗಿ ಮಾಡಬೇಕು’ಎಂದರು.
ಶಾಸಕ ಎಚ್.ವೈ. ಮೇಟಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ ಮಾತನಾಡಿ, ‘ಶಿವಾಜಿ ಮಹಾರಾಜರು ಹುಟ್ಟಿನಿಂದಲೇ ಶೂರ, ಧೀರ ಹಾಗೂ ಮಾನವೀಯ ಮೌಲ್ಯವುಳ್ಳವನಾಗಿದ್ದರು’ ಎಂದರು.
ಶಿರೂರ ಸಿದ್ದೇಶ್ವರ ಪ್ರೌಢಶಾಲೆ ಸಹ ಶಿಕ್ಷಕ ಸಂಜಯ ನಡುವಿನಮನಿ ಛತ್ರಪತಿ ಶಿವಾಜಿ ಮಹಾರಾಜ ಕುರಿತು ಉಪನ್ಯಾಸ ನೀಡಿದರು. ಮುಖಂಡರಾದ ಶೇಖರ ಮಾನೆ, ಶ್ರೀಕಾಂತ ಪಾಟೀಲ, ಆರ್.ಆರ್. ಸೂರ್ಯವಂಶಿ, ವಾಸುದೇವ ಜಾಧವ, ಕಲ್ಪನಾ ಸಾವಂತ ಉಪಸ್ಥಿತರಿದ್ದರು.
ಬಿಜೆಪಿ ಕಾರ್ಯಾಲಯ: ಬಿಜೆಪಿ ಬಾಗಲಕೋಟೆ ಮತಕ್ಷೇತ್ರದಿಂದ ಬುಧವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು, ಮುಖಂಡ ಬಸವರಾಜ ಯಂಕಂಚಿ, ಸಮಾಜದ ಮುಖಂಡ ಗುಂಡುರಾವ್ ಶಿಂಧೆ ಹಾಗೂ ಜಿಲ್ಲಾ ಶಿಕ್ಷಣ ಪ್ರಕೋಷ್ಠದ ಸಹಸಂಚಾಲಕ ಅಂಬರೀಶ ಗೊಂದಿ ಮಾತನಾಡಿದರು. ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಪ್ರಧಾನಕಾರ್ಯದರ್ಶಿ ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಯಲ್ಲಪ್ಪ ನಾರಾಯಣಿ, ಬಸವರಾಜ ಅವರಾದಿ, ಎಂ.ಆರ್ ಶಿಂಧೆ, ರಾಜು ವಾಘ, ತಾನಾಜಿ ಜಮಖಂಡಿ, ಸುಜಾತಾ ಶಿಂಧೆ ಮತ್ತಿರರು ಇದ್ದರು.
‘ಯುವಕರಲ್ಲಿ ಶಿವಾಜಿಯಂತೆ ರಾಷ್ಟ್ರಾಭಿಮಾನ ಮೂಡಿಸಿ’
ಮಹಾಲಿಂಗಪುರ: ‘ಶಿವಾಜಿ ಮಹಾರಾಜರಂತೆ ನಮ್ಮ ದೇಶದ ಯುವಕರಲ್ಲಿ ಧೈರ್ಯ, ಸ್ಥೈರ್ಯ ಬೆಳೆಸಬೇಕಿದೆ. ಶಿವಾಜಿ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ತಿಳಿಸಿ ಯುವಕರಲ್ಲಿ ರಾಷ್ಟ್ರಾಭಿಮಾನ ಮೂಡಿಸಬೇಕು’ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.
ಶಿವಾಜಿ ಜಯಂತಿ ಅಂಗವಾಗಿ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಬುಧವಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸದಸ್ಯ ಶೇಖರ ಅಂಗಡಿ, ವ್ಯವಸ್ಥಾಪಕ ಎಸ್.ಎನ್.ಪಾಟೀಲ, ಅರ್ಜುನ ಮೋಪಗಾರ, ಎಸ್.ಎಂ.ಕಲಬುರಗಿ, ಪಿ.ವೈ.ಸೊನ್ನದ, ಎಂ.ಎಂ.ಮುಗಳಖೋಡ, ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ಎಂ.ಎಸ್.ಮುಲ್ಲಾ, ಲಕ್ಷ್ಮಣ ಮಾಂಗ, ರಾಮು ಮಾಂಗ ಇತರರು ಇದ್ದರು.
‘ಶಿವಾಜಿ ಆದರ್ಶ ಯುವಕರು ಪಾಲಿಸಿ’
ಬಾದಾಮಿ : ‘ಯುವಕನಾಗಿದ್ದಾಗಲೇ ಶಿವಾಜಿಯು ದೇಶಾಭಿಮಾನ ಹೊಂದಿದ್ದರು. ಮೊಘಲರ ಮತ್ತು ಬ್ರಿಟಿಷರ ವಿರುದ್ಧ ಹೋರಾಡಿ ರಾಷ್ಟ್ರವನ್ನು ರಕ್ಷಿಸಿದ. ಯುವಕರು ಛತ್ರಪತಿ ಶಿವಾಜಿಯ ಆದರ್ಶಗಳನ್ನು ಅರಿತುಕೊಳ್ಳಬೇಕು’ಎಂದು ಸಾಹಿತಿ ಜೆ. ದಾಜೀಬಾ ಹೇಳಿದರು.
ಇಲ್ಲಿನ ಕಿಲ್ಲಾ ಓಣಿಯ ಅಂಬಾಭವಾನಿ ದೇವಾಲಯದ ಆವರಣದಲ್ಲಿ ತಾಲ್ಲೂಕಿನ ಮರಾಠಾ ಸಮಾಜದ ಆಶ್ರಯದಲ್ಲಿ ಬುಧವಾರ ನಡೆದ ಛತ್ರಪತಿ ಶಿವಾಜಿ 395ನೇ ಜಯಂತಿ ಉತ್ಸವ ಸಮಾರಂಭದಲ್ಲಿ ಅವರು ಶಿವಾಜಿ ಬಾಲ್ಯ, ಬದುಕು ಮತ್ತು ಹೋರಾಟದ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಮಹಿಳೆಯರು ತೊಟ್ಟಿಲಿನಲ್ಲಿ ಶಿವಾಜಿ ಮೂರ್ತಿಯನ್ನಿರಿಸಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು.
ಶಾಂತಗೌಡ ಪಾಟೀಲ, ಮಂಜು ಹೊಸಮನಿ, ಮಹೇಶ ಹೊಸಗೌಡ್ರ, ಆರ್.ಎಫ್. ಬಾಗವಾನ ಅತಿಥಿಗಳಾಗಿ ಆಗಮಿಸಿದ್ದರು. ಮರಾಠಾ ಸಮಾಜದ ಅಧ್ಯಕ್ಷ ಅಶೋಕ ಗಂಗೋಜಿ, ಹಣಮಂತ ಸಂಕಪಾಳೆ, ಗೋವಿಂದಪ್ಪ ಪವಾರ, ವಿದ್ಯಾನಂದ ಜಾಧವ, ರಮೇಶ ರಾಣೆ, ಶಿವಾಜಿರಾವ್ ಪವಾರ, ಉಮೇಶ ಪವಾರ, ತಿಪ್ಪಣ್ಣ ನೀಲಗುಂದ ಮತ್ತು ಯುವಕರು ಇದ್ದರು.
‘ಶಿವಾಜಿ ಅಪ್ಪಟ ದೇಶ ಭಕ್ತ’
ಕೆರೂರ: ‘ಶಿವಾಜಿ ಮಹಾರಾಜರು ಅಪ್ಪಟ ದೇಶ ಭಕ್ತರಾಗಿದ್ದರು. ಅವರ ಧೈರ್ಯ, ಸಾಹಸ ಯುವಕರಿಗೆ ಸ್ಪೂರ್ತಿದಾಯಕವಾಗಿವೆ’ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ಹೇಳಿದರು.
ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಶಿವಾಜಿ ಮಹರಾಜರ ಭಾವಚಿತ್ರಕ್ಕೆ ಬುಧವಾರ ಪೂಜೆ ಸಲ್ಲಿಸಿ, ‘ವಿಧ್ಯಾರ್ಥಿಗಳು, ಯುವಜನರು ಶಿವಾಜಿ ಜೀವನ ಮೌಲ್ಯಗಳನ್ನು ಅನುಸರಿಸಬೇಕು’ಎಂದು ಡಾ.ಬಸವರಾಜ ಬೋಂಬ್ಲೆ ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಕುಮಾರ ಐಹೊಳ್ಳಿ, ಸಿದ್ದಣ್ಣ ಕೊಣ್ಣೂರ, ಮುಖಂಡ ಆನಂದ ಪರದೇಶಿ, ಹನಮಂತ ಪ್ರಭಾಕರ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಎಂ.ಐ.ಹೊಸಮನಿ, ಜಿ.ಎ.ನಧಾಫ್, ಅಶ್ವಥ ರಂಗನೌಡ್ರ, ಮಹಾಂತೇಶ ಅನ್ನೆನ್ನವರ, ಸಂಗಮೇಶ ಮಾದರ, ನವೀನ ಮಾಹಜನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.