ADVERTISEMENT

ಬಾಗಲಕೋಟೆ: ಇಂದೇ ಬನ್ನಿ; ಸುರಕ್ಷಾ ಕ್ರಮ ವೀಕ್ಷಿಸಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಮಕ್ಕಳು, ಪಾಲಕರಲ್ಲಿ ವಿಶ್ವಾಸ ತುಂಬುವ ಪ್ರಯತ್ನ

ವೆಂಕಟೇಶ್ ಜಿ.ಎಚ್
Published 23 ಜೂನ್ 2020, 19:30 IST
Last Updated 23 ಜೂನ್ 2020, 19:30 IST
ಹುನಗುಂದ ತಾಲ್ಲೂಕಿನ ಚಿತ್ತರಗಿಯ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವನ್ನು ಮಂಗಳವಾರ ಆರೋಗ್ಯ ಇಲಾಖೆ ಸ್ಯಾನಿಟೈಸ್ ಮಾಡಿದರು
ಹುನಗುಂದ ತಾಲ್ಲೂಕಿನ ಚಿತ್ತರಗಿಯ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವನ್ನು ಮಂಗಳವಾರ ಆರೋಗ್ಯ ಇಲಾಖೆ ಸ್ಯಾನಿಟೈಸ್ ಮಾಡಿದರು   

ಬಾಗಲಕೋಟೆ: ಕೋವಿಡ್–19 ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಪರ–ವಿರೋಧ ದನಿಯ ನಡುವೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುರಕ್ಷಿತ ಹಾಗೂ ಭಯರಹಿತವಾಗಿ ಪರೀಕ್ಷೆ ನಡೆಸಲುಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ.

ಪರೀಕ್ಷಾ ಕೇಂದ್ರಕ್ಕೆ ಭೇಟಿಗೆ ಅವಕಾಶ: ಪಾಲಕರು ಹಾಗೂ ಮಕ್ಕಳಲ್ಲಿ ವಿಶ್ವಾಸ ತುಂಬಲು ಪರೀಕ್ಷೆಗೆ ಎರಡು ದಿನ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಲು ಈ ಬಾರಿ ಅವಕಾಶ ಮಾಡಿಕೊಡಲಾಗಿದೆ. ಈ ಮುಂಚೆ ಪರೀಕ್ಷೆ ದಿನವೇ ವಿದ್ಯಾರ್ಥಿಗಳು ಕೇಂದ್ರಕ್ಕೆ ಬರಬೇಕಾಗಿತ್ತು.

’ಪರೀಕ್ಷೆಯು ಜೂನ್‌ 25ರಿಂದ ಆರಂಭವಾಗಲಿದೆ. ಆಸಕ್ತ ವಿದ್ಯಾರ್ಥಿಗಳು 24 ರಂದು ಸಂಜೆ 5 ಗಂಟೆಯವರೆಗೆ ತಮ್ಮ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ, ಗೊಂದಲ ಪರಿಹರಿಸಿಕೊಳ್ಳಬಹುದು. ಆ ಬಗ್ಗೆ ಎಲ್ಲರಿಗೂ ಈಗಾಗಲೇ ಕರೆ ಮಾಡಿ ಮಾಹಿತಿ ನೀಡಿದ್ದೇವೆ‘ ಎಂದು ಡಿಡಿಪಿಐ ಶ್ರೀಶೈಲ ಎಸ್.ಬಿರಾದಾರ ’ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮಕ್ಕಳು ಹಾಗೂ ಪಾಲಕರು ಬಂದು ವೀಕ್ಷಣೆ ಮಾಡಿದ ನಂತರ ಬುಧವಾರ ಸಂಜೆ 6ರಿಂದ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಮತ್ತೊಮ್ಮೆ ಸ್ಯಾನಿಟೈಸ್ ಮಾಡಿ ಮರುದಿನದ ಪರೀಕ್ಷೆಗೆ ಸಿದ್ಧಗೊಳಿಸಲಾಗುವುದು ಎಂದರು.

ಮಾಸ್ಕ್ ವಿತರಣೆ:ಭಾರತ್ ಸ್ಕೌಟ್ ಅಂಡ್ ಗೈಡ್ಸ್ ವತಿಯಿಂದ ಪೂರೈಸಲಾದ ಮಾಸ್ಕ್‌ಗಳನ್ನು ಪ್ರತಿ ವಿದ್ಯಾರ್ಥಿಗೆ ಒಂದರಂತೆ ವಿತರಣೆ ಮಾಡಲಾಗುವುದು. ಹೆಚ್ಚುವರಿಯಾಗಿ 10 ಸಾವಿರ ಸೇರಿದಂತೆ ಒಟ್ಟು 45 ಸಾವಿರ ಮಾಸ್ಕ್‌ಗಳನ್ನು ಸ್ಕೌಟ್‌ ಅಂಡ್ ಗೈಡ್ಸ್‌ನವರು ಕೊಟ್ಟಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ದಾನಿಗಳು ಮಾಸ್ಕ್ ಮತ್ತು ಸ್ಯಾನಿಟೈಸರ್ ಪೂರೈಸಿ ಮಕ್ಕಳ ನೆರವಿಗೆ ಧಾವಿಸಿದ್ದಾರೆ.

ಪರೀಕ್ಷೆ ಕಾರ್ಯ ನಿರ್ವಿಘ್ನವಾಗಿ ನಡೆಯಲು ಪ್ರತಿ ಕೇಂದ್ರಕ್ಕೆ ಮೂವರಂತೆ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಭಾರತ ಸೇವಾ ದಳದ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಶ್ರೀಶೈಲ ಬಿರಾದಾರ ತಿಳಿಸಿದರು.

ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ತಾಲ್ಲೂಕಿಗೆ ಮೂರು ಹಾಗೂ ಜಿಲ್ಲಾ ಮಟ್ಟದಲ್ಲಿ ಆರು ಜಾಗೃತ ದಳ ತಂಡಗಳ ರಚಿಸಲಾಗಿದೆ. ಈ ತಂಡದಲ್ಲಿ ಆಯಾ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಇರಲಿದ್ದಾರೆ ಎಂದರು.

‍ಪೂರಕ ಪರೀಕ್ಷೆಯಲ್ಲಿ ಅವಕಾಶ:ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದ ಮುಧೋಳದ ವಿದ್ಯಾರ್ಥಿಯೊಬ್ಬನಿಗೆ ಕೋವಿಡ್–19 ಸೋಂಕು ದೃಢಪಟ್ಟಿದೆ. ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ವಿದ್ಯಾರ್ಥಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.