ADVERTISEMENT

ರನ್ನಬೆಳಗಲಿ ಪಟ್ಟಣ ಅಭಿವೃದ್ಧಿಗೆ ಬದ್ಧ: ಸಚಿವ ಆರ್.ಬಿ.ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 14:36 IST
Last Updated 13 ಫೆಬ್ರುವರಿ 2025, 14:36 IST
ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಫಲಾನುಭವಿಗೆ ಹೊಲಿಗೆ ಯಂತ್ರ ವಿತರಿಸಿದರು
ಮಹಾಲಿಂಗಪುರ ಸಮೀಪದ ರನ್ನಬೆಳಗಲಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಫಲಾನುಭವಿಗೆ ಹೊಲಿಗೆ ಯಂತ್ರ ವಿತರಿಸಿದರು   

ಮಹಾಲಿಂಗಪುರ: ‘ರನ್ನ ವೈಭವದ ಮೊದಲ ದಿನದ ಕಾರ್ಯಕ್ರಮವನ್ನು ರನ್ನ ಬೆಳಗಲಿಯಲ್ಲಿ ಹಮ್ಮಿಕೊಳ್ಳುವ ಮೂಲಕ ಇಲ್ಲಿನ ಜನರ ಆಕಾಂಕ್ಷೆ ಈಡೇರಿಸಿದ್ದೇನೆ. ರನ್ನ ವೈಭವವನ್ನು ಎಲ್ಲರೂ ಕೂಡಿ ಯಶಸ್ವಿಗೊಳಿಸೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಸಮೀಪದ ರನ್ನಬೆಳಗಲಿ ಪಟ್ಟಣದಲ್ಲಿ ಗುರುವಾರ ಅಂದಾಜು ₹10.92 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

‘ರನ್ನ ವೈಭವಕ್ಕೆ ರಾಜಕಾರಣ ಬೇಡ, ರನ್ನ ನಾಡು ರಾಷ್ಟ್ರದ ಸಂಪತ್ತಾಗಿದೆ. ಹೀಗಾಗಿ, ರನ್ನ ವೈಭವಕ್ಕೆ ಘನತೆ ಹೆಚ್ಚಿಸಲು ಪ್ರಯತ್ನಿಸೋಣ’ ಎಂದರು.

ADVERTISEMENT

ನಗರೋತ್ಥಾನ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ಅಲ್ಮೇರಾ, ಹೊಲಿಗೆ ಯಂತ್ರ, ಪೌರಕಾರ್ಮಿಕರಿಗೆ ಸುರಕ್ಷಾ ಕಿಟ್ ಹಾಗೂ ಸೋಲಾರ್ ವಾಟರ್ ಹೀಟರ್ ವಿತರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯಡಿ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ ವಿತರಿಸಿದರು.

ರನ್ನಬೆಳಗಲಿ ಪಟ್ಟಣ ಪಂಚಾಯ್ತಿ ಕಾರ್ಯಾಲಯಕ್ಕೆ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ, ಶಿಥಿಲಗೊಂಡ ಹಳೆಯ ಗ್ರಂಥಾಲಯವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಚೇರಿ ಕೊಠಡಿ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು.

ಸಿದ್ದರಾಮ ಶಿವಯೋಗಿ ಸಾನ್ನಿಧ್ಯ ವಹಿಸಿದ್ದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ರೂಪಾ ಹೊಸಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ, ತಾಲ್ಲೂಕು ಆರೋಗ್ಯಾಧಿಕಾರಿ ಎಸ್.ಎಸ್.ಮಲಘಾಣ, ವಿವಿಧ ಇಲಾಖೆ ಅಧಿಕಾರಿಗಳು, ಪಟ್ಟಣ ಪಂಚಾಯ್ತಿ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.