ADVERTISEMENT

ಬಡವರು, ಕಾರ್ಮಿಕರ ಹಿಂಸಿಸುತ್ತಿರುವ ಬಿಜೆಪಿ: ಕಾಂಗ್ರೆಸ್ ನಾಯಕಿ ಉಮಾಶ್ರೀ ಆರೋಪ

ಬಂಡವಾಳಶಾಹಿಗಳ ಕೈಗೆ ದೇಶ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 16:44 IST
Last Updated 28 ಡಿಸೆಂಬರ್ 2020, 16:44 IST
ಬನಹಟ್ಟಿಯ ಕಾಂಗ್ರೆಸ್‍ ಕಾರ್ಯಾಲಯದಲ್ಲಿ 135ನೇ ಕಾಂಗ್ರೆಸ್ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು
ಬನಹಟ್ಟಿಯ ಕಾಂಗ್ರೆಸ್‍ ಕಾರ್ಯಾಲಯದಲ್ಲಿ 135ನೇ ಕಾಂಗ್ರೆಸ್ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು   

ರಬಕವಿ ಬನಹಟ್ಟಿ: ದೇಶದಲ್ಲಿ ಇಂದು ಪ್ರಜಾಪ್ರಭುತ್ವದ ಬದಲಾಗಿ ಸರ್ವಾಧಿಕಾರ ಆಡಳಿತ ನಡೆಯುತ್ತಿದೆ. ಬಿಜೆಪಿಯಿಂದ ದೇಶದಲ್ಲಿ ಆಂತರಿಕ ಗುಲಾಮಗಿರಿ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಉಮಾಶ್ರೀ ಆರೋಪಿಸಿದರು.

ಅವರು ಸೋಮವಾರ ಸ್ಥಳೀಯ ಕಾಂಗ್ರೆಸ್ ‍ಕಾರ್ಯಾಲಯದಲ್ಲಿ ನಡೆದ 135ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಸ್ವಾತಂತ್ರ್ಯ ಆಂದೋಲನದಲ್ಲಿ ಸಾಮಾನ್ಯ ಜನರ ತ್ಯಾಗ ಬಲಿದಾನಗಳು ಕೂಡಾ ಇವೆ. ಇಂದಿನ ಜಗತ್ತಿನಲ್ಲಿ ಶಾಂತಿಯ ಬದಲಾಗಿ ಕ್ರಾಂತಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಪ್ರಪಂಚಕ್ಕೆ ಶಾಂತಿ ಮಂತ್ರ ಹೇಳಿದ್ದು ಕಾಂಗ್ರೆಸ್. ಕಾಂಗ್ರೆಸ್ ಈ ದೇಶದ ಜನರಲ್ಲಿ ರಾಷ್ಟ್ರೀಯತೆ ಮತ್ತು ಸ್ವಾಭಿಮಾವನ್ನು ತುಂಬಿದ ಪಕ್ಷ ಎಂದರು. ಬಿಜೆಪಿಯ ಆಡಳಿತದಿಂದಾಗಿ ಕಾರ್ಮಿಕರು, ಸಾಮಾನ್ಯ ಜನರು, ರೈತರು, ಚಿಕ್ಕ ಪುಟ್ಟ ಉದ್ದಿಮೆದಾರರು ಸಾಕಷ್ಟು ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ದೇಶವನ್ನು ಬಂಡವಾಳಶಾಹಿಗಳ ಕೈಗೆ ನೀಡಲಾಗುತ್ತಿದೆ ಎಂದು ದೂರಿದರು.

ಇದೇ ಸಂದರ್ಭದಲ್ಲಿ ಮುಖಂಡ ಷಣ್ಮುಖಪ್ಪ ಉಳ್ಳಾಗಡ್ಡಿ ಮಾತನಾಡಿ, ಕಾಂಗ್ರೆಸ್‍ ಜಾತ್ಯತೀತ ಪಕ್ಷವಾಗಿದ್ದು, ಬಿಜೆಪಿ ಜಾತೀಯತೆಯ ಪಕ್ಷವಾಗಿದೆ. ಕಾಂಗ್ರೆಸ್ ಎಂದರೆ ದೇಶದ ಅಭಿವೃದ್ಧಿ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು ತಮ್ಮಲ್ಲಿಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷವನ್ನು ಸಂಘಟಿಸಿ ಆಡಳಿತಕ್ಕೆ ತರಲು ಶ್ರಮಿಸಬೇಕು ಎಂದರು.

ADVERTISEMENT

ಡಾ.ಎ.ಆರ್‍.ಬೆಳಗಲಿ, ಲಕ್ಷ್ಮಣ ದೇಸಾರಟ್ಟಿ, ನೀಲಕಂಠ ಮುತ್ತೂರ ಮತ್ತು ಬಸವರಾಜ ಕೊಕಟನೂರ ಮಾತನಾಡಿದರು.

ಮೀನಾಕ್ಷಿ ಕೊಟಕನೂರ, ಮಲ್ಲಪ್ಪ ಸಿಂಗಾಡಿ, ಶಂಕರ ಜಾಲಿಗಿಡದ, ರಾಜೇಂದ್ರ ಭದ್ರನವರ, ಅಶೋಕ ಆಲಗೊಂಡ, ರಾಜು ಕುಲಕರ್ಣಿ, ಸತ್ಯಪ್ಪ ಮಗದುಮ್ ಇದ್ದರು. ಸಮಾರಂಭದಲ್ಲಿ ಮಾಳು ಹಿಪ್ಪರಗಿ, ರಾಹುಲ ಕಲಾಲ, ಕಿರಣ ಕರಲಟ್ಟಿ, ಉಸ್ಮಾನಸಾಬ್‍ ಲೆಂಗ್ರೆ, ಬಸವರಾಜ ಗುಡೋಡಗಿ, ಮಾರುತಿ ಸೋರಗಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.