ಮುಧೋಳ: ‘ಕಾಂಗ್ರೆಸ್ ಪಕ್ಷ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷವಾಗಿದ್ದು, ತಮ್ಮ ಆಡಳಿತದ ಸಾಧನೆಯೇ ಶ್ರೇಷ್ಠವೆಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜ್ಯ ನಾಯಕರದ್ದು ಶೂನ್ಯ ಸಾಧನೆಯಾಗಿದೆ’ ಎಂದು ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಸಂಗಣ್ಣ ಕಾತರಕಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ನಿತ್ಯ ಅತ್ಯಾಚಾರ, ಕೊಲೆಗಳು ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ರಕ್ಷಣೆಯೇ ಇಲ್ಲದಾಗಿದೆ. ಕಾನೂನು ಸುವವ್ಯಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ಆರೋಪಿಸಿದರು.
‘ತಾಲ್ಲೂಕಿನಲ್ಲಿ ಹಿಂದಿನ ಶಾಸಕರ ಸಾಧನೆಗಳನ್ನು ಈಗಿನ ಶಾಸಕರು ತಾವು ಮಾಡಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ನಮ್ಮವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಮತಕ್ಷೇತ್ರದ ಅಭಿವೃದ್ದಿಗೆ ಬಿಡಿಗಾಸು ತಂದಿಲ್ಲ’ ಎಂದು ಸ್ಥಳೀಯ ಶಾಸಕರ ಕಾರ್ಯವೈಖರಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
‘ನಗರದಲ್ಲಿ ಸ್ವಚ್ಛತೆ, ಕುಡಿಯುವ ನೀರು, ನೈರ್ಮಲೀಕರಣ ಹಾಳಾಗಿದ್ದು, ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಕೂಡಲೇ ಸಚಿವರು ಇದರತ್ತ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ನಾಗಪ್ಪ ಅಂಬಿ ಮಾತನಾಡಿ, ‘ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಚುಕ್ಕಾಣಿ ಹಿಡಿದ ಮೇಲೆ ಗ್ಯಾಂಗ್ ವಾರ್, ಕೊಲೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಗೃಹ ಇಲಾಖೆ ನಿದ್ರಾವಸ್ಥೆಯಲ್ಲಿದ್ದು ಅಪರಾಧ ಕೃತ್ಯಗಳನ್ನು ಸಂಪೂರ್ಣವಾಗಿ ತಡೆಯುವಲ್ಲಿ ವಿಫಲವಾಗಿದೆ’ ಎಂದರು.
‘ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ಗ್ಯಾರಂಟಿ ಯೋಜನೆಯ ಸುಳ್ಳು ಭರವಸೆ ನೀಡಿ, ಇದೀಗ ಪ್ರತಿಯೊಂದರಲ್ಲೂ ಬೆಲೆ ಏರಿಕೆಗೆ ಮಾಡುತ್ತಾ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದೆ’ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ.ರವಿ ನಂದಗಾವಿ, ಶ್ರೀಶೈಲ ಚಿನ್ನನ್ನವರ, ರುದ್ರಪ್ಪ ಅಡವಿ, ಹನಮಂತ ತುಳಸಿಗೇರಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.