ಜಮಖಂಡಿ: ‘ನಗರದ ವಿವಿಧ ರಸ್ತೆಗಳಲ್ಲಿ ಪ್ರಯಾಣಿಕರು ನಿಲ್ಲಲು ಅನುಕೂಲವಾಗಲು ಬಸ್‌ನಿಲ್ದಾಣ ನಿರ್ಮಿಸಲಾಗುವುದು’ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಕುಡಚಿ ರಸ್ತೆ ಕಡಪಟ್ಟಿ ಕ್ರಾಸ್ ಹತ್ತಿರ ರೋಟರಿ ಸಂಸ್ಥೆಯಿಂದ ನೂತನವಾಗಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
‘ರೋಟರಿ ಸಂಸ್ಥೆ ಹಲವು ಸಮಾಜಮುಖಿ ಕೆಲಸ ಮಾಡುತ್ತಿದೆ. ಸ್ವಚ್ಛತೆ, ಶಿಕ್ಷಣ, ಆರೋಗ್ಯ, ಸಮಾಜ ಸೇವೆ, ಬಡವರಿಗೆ ಸಹಾಯ ಇನ್ನಿತರ ಅನೇಕ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
ಜಿಲ್ಲಾ ಗವರ್ನರ್ ಶರದ ಪೈ ಮಾತನಾಡಿ, ‘ರೋಟರಿ 220 ದೇಶಗಳಲ್ಲಿ 14 ಲಕ್ಷ ಸದಸ್ಯರನ್ನು ಒಳಗೊಂಡಿದೆ. ಮಾನವೀಯ ಮೌಲ್ಯಗಳು ಕಾಯಕವೇ ಕೈಲಾಸ ಎಂಬ ಶೀರ್ಷಿಕೆಯಡಿ ಕೆಲಸ ಮಾಡುತ್ತಿದೆ’ ಎಂದರು.
ಮುತ್ತಿನ ಕಂತಿ ಹಿರೇಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀ ಮಾತನಾಡಿ, ‘ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾನೇನು ಕೊಟ್ಟಿದ್ದೇನೆ ಎಂಬುದು ಮುಖ್ಯ. ನೂತನ ಬಸ್ ನಿಲ್ದಾಣದಿಂದ ಹಲವು ಬಡಸಾಮಾನ್ಯ ಜನರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಕಿರಣಕುಮಾರ ದೇಸಾಯಿ ಪ್ರಾಸ್ತಾವಿಕ ಮಾತನಾಡಿದರು. ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಕಡಪಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುಪಾದ ಇಟ್ಟಿ, ಎಸ್.ಆರ್.ಬಂಡಿವಡ್ಡರ, ಎ.ಆರ್.ತೇಲಿ, ಆರ್.ಪಿ. ನ್ಯಾಮಗೌಡ, ಶಂಕರ ಪಟ್ಟಣಶೆಟ್ಟಿ, ಪ್ರಕಾಶ ಶಿಂದೆ, ನಾಗಪ್ಪ ಸನದಿ, ದೇವಲ ದೇಸಾಯಿ, ಕೆ.ಐ.ಗುರುಮಠ, ಮಹಾವೀರ ಕೋರಿ, ರಾಘವೇಂದ್ರ ಭಟ್, ಗೋಪಾಲ್ ಕೃಷ್ಣ ಪ್ರಭು ಇದ್ದರು. ಶಶಿ ಕಡೆಬಾಗಿಲು ನಿರೂಪಿಸಿದರು. ಕಾರ್ಯದರ್ಶಿ ಮಲ್ಲಪ್ಪ ಬುಜರುಕ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.