ಬಾಗಲಕೋಟೆ: ‘ಧೈರ್ಯ ಮಾಡಿ ಸಂಸ್ಥೆ ಕಟ್ಟದಿದ್ದರೆ ಯಾರಿಗೂ ಸಹಾಯ ಮಾಡಲು ಆಗುವುದಿಲ್ಲ. ಅಂತಹ ಧೈರ್ಯವನ್ನು ಮಾಜಿ ಸಚಿವ ಎಸ್.ಆರ್. ಪಾಟೀಲ ಮಾಡಿದ್ದಾರೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನವನಗರದಲ್ಲಿ ಬಹುರಾಜ್ಯ ಬ್ಯಾಂಕ್ ಆಗಿ ಮೇಲ್ದರ್ಜೆಗೇರಿರುವ ಮಾಜಿ ಸಚಿವ ಎಸ್.ಆರ್.ಪಾಟೀಲ ನೇತೃತ್ವದ ಬಾಪೂಜಿ ಮಲ್ಟಿಸ್ಟೇಟ್ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದ ಅವರು, ‘ಮನುಷ್ಯನ ಜೀವನದಲ್ಲಿ ಏರಿಳಿತ ಇದ್ದೇ ಇರುತ್ತದೆ. ನಿಯತ್ತು ಚೆನ್ನಾಗಿರುವವರನ್ನು ಎತ್ತಿ ಹಿಡಿಯಬೇಕು. ಸೌಹಾರ್ದ, ಸಹಕಾರ ಬ್ಯಾಂಕುಗಳು ಸಹಾಯಕ್ಕೆ ಬರುತ್ತವೆಯೇ ಹೊರತು, ರಾಷ್ಟ್ರೀಯ ಬ್ಯಾಂಕುಗಳು ಬರುವುದಿಲ್ಲ’ ಎಂದರು.
‘ಸಕ್ಕರೆ ಸೇರಿದಂತೆ ಕೃಷಿ ಆಧಾರಿತ ಉದ್ಯಮಗಳು ಸದೃಢಗೊಂಡಿದ್ದೇ ಸಹಕಾರ ಬ್ಯಾಂಕ್‍ಗಳಿಂದ. ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಾಧ್ಯವಾಗದ ಕೆಲಸಗಳನ್ನು ಸೌಹಾರ್ದ ಸಹಕಾರಿ ಬ್ಯಾಂಕ್‍ಗಳು ಮಾಡಿ ತೋರಿಸಿವೆ’ ಎಂದರು.
‘ಸಕ್ಕರೆ ಕಾರ್ಖಾನೆಗಳು ಆರ್ಥಿಕವಾಗಿ ಸದೃಢವಾದರೆ ಹತ್ತಾರು ಸಾವಿರ ರೈತ ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತವೆ. ಅದಕ್ಕಾಗಿ ಅವುಗಳಿಗೆ ಸಹಕಾರ ಬ್ಯಾಂಕ್‍ಗಳಿಂದ ಸಾಲ ನೀಡಲಾಗುತ್ತದೆ’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ‘ಸಕ್ಕರೆ ಕಾರ್ಖಾನೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿದ್ದರೆ ಅದಕ್ಕೆ ಸಹಕಾರ ಬ್ಯಾಂಕ್‍ಗಳು ಕಾರಣ. ನಮ್ಮ ಬ್ಯಾಂಕ್‍ಗಳಿಂದ ಮಾತ್ರವೇ ಸಾಲ ಲಭಿಸುತ್ತದೆ’ ಎಂದರು.
ಶಾಸಕ ಎಚ್.ವೈ.ಮೇಟಿ ಮಾತನಾಡಿ, ‘ಮಾಜಿ ಸಚಿವ ಎಸ್.ಆರ್.ಪಾಟೀಲ ಸಹಕಾರ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುವುದಲ್ಲದೇ ಗ್ರಾಮೀಣ ಭಾಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಿದ್ದಾರೆ. ಅವರ ಶ್ರಮದಿಂದಾಗಿ ಈ ಭಾಗದ ಸಾಕಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ’ ಎಂದರು.
ಬಾಪೂಜಿ ಮಲ್ಟಿಸ್ಟೇಟ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ‘ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಕೇಳಿದರೆ ಲೋಡ್‍ಗಟ್ಟಲೇ ದಾಖಲೆಗಳನ್ನು ಕೇಳುತ್ತಾರೆ. ಸಾಮಾನ್ಯ ಜನರಿಗೆ ಸುಲಭದಲ್ಲಿ ಸಾಲ ನೀಡಿ ನೆರವಾಗುತ್ತ ಬಂದಿರುವುದು ಸಹಕಾರಿ ಬ್ಯಾಂಕ್‍ಗಳು ಮಾತ್ರ’ ಎಂದರು.
‘ಮೆಡಿಕಲ್ ಕಾಲೇಜು ಆರಂಭ ಮಾಡುವಾಗಲೂ ಸಹ ಬೆಳಗಾವಿ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ನೆರವಾಗಿದ್ದವು. ಬೀಳಗಿ ಸಕ್ಕರೆ ಕಾರ್ಖಾನೆ ರೈತರ ಬಾಕಿ ಪಾವತಿಸುವಾಗ ಯತ್ನಾಳರು ತಮ್ಮ ಬ್ಯಾಂಕ್ ಮೂಲಕ ಸಾಲ ನೀಡಿದ್ದರು. ಬಾಪೂಜಿ ಬ್ಯಾಂಕ್ ಬೇರೆ ರಾಜ್ಯಗಳಲ್ಲಿಯೂ ಕಾರ್ಯಾರಂಭ ಮಾಡಲಿದೆ’ ಎಂದು ಹೇಳಿದರು.
ಬ್ಯಾಂಕ್ ಉಪಾಧ್ಯಕ್ಷ ಜಿ.ಎನ್.ಪಾಟೀಲ, ಸತ್ಯಪ್ಪ ಮೇಲ್ನಾಡ, ನಿರ್ದೇಕರಾದ ಎ.ಎಂ.ಶೆಟ್ಟರ, ಎಸ್.ಕೆ.ಯಡಹಳ್ಳಿ, ಎಲ್.ಕೆ.ಬಳಗಾನೂರ, ಎಂ.ಎಸ್. ಪಾಟೀಲ, ಸಿ.ಎಂ. ನ್ಯಾಮಗೌಡ, ಅಶೋಕ ಲಾಗಲೋಟಿ, ಆರ್.ಪಿ. ಕಲಬುರ್ಗಿ, ಎಸ್.ಬಿ. ಬೆಳಗಲಿ, ಎಸ್.ಎಸ್. ರಂಗನಗೌಡರ, ಎಸ್.ಸಿ. ಬಂಡಿವಡ್ಡರ, ಎಸ್.ಕೆ. ತಳವಾರ, ಎಂ.ಟಿ. ಅರಳಿಕಟ್ಟಿ, ವಿ.ಎಲ್. ಕುರ್ತಕೋಟಿ, ಎಸ್.ಎಸ್. ಪಾತ್ರೋಟ, ಪ್ರಧಾನ ವ್ಯವಸ್ಥಾಪಕ ವಿ.ಎಸ್.ಭಟ್, ಸಿಇಒ ಎಸ್.ಸಿ.ಮೋಟಗಿ ಇದ್ದರು.
ವಧು-ವರರ ಕೇಂದ್ರಗಳಾದ ಬ್ಯಾಂಕ್
‘ನಮ್ಮ ಮಗಗ ಕನ್ಯಾ ಸಿಗ್ತಿಲ್ಲ ನಿಮ್ಮ ಬ್ಯಾಂಕ್‍ನಾಗ ನೌಕರಿ ಕೊಡ್ರಿ ಅಂಥ ದಿನಾ ಹತ್ತಾರು ಜನ ಬರ್ತಾರ. ಸಹಕಾರ ಬ್ಯಾಂಕ್‍ಗಳು ಒಂದು ಅರ್ಥದಲ್ಲಿ ವಧು-ವರರ ಕೇಂದ್ರವಾಗಿವೆ. ಅನೇಕರ ಮದುವೆ ಮಾಡಿಸುವುದರ ಮೂಲಕ ಕಲ್ಯಾಣದ ಕೆಲಸ ಮಾಡಿವೆ. ಇದು ವಾಸ್ತವವೂ ಹೌದು’ ಎಂದು ಶಾಸಕ ಯತ್ನಾಳ ಎಂದು ಹೇಳಿದರು. ‘ಮಗ ಬ್ಯಾಂಕಿನಲ್ಲಿ ಮ್ಯಾನೇಜರ್ ಇದ್ದಾನೆ ಎಂದರೆ ಕನ್ಯಾ ಸಿಗುತ್ತದೆ. ಅದಕ್ಕಾಗಿ ಉದ್ಯೋಗ ಕೊಡಿ ಎಂದು ಅನೇಕರು ಬರುತ್ತಾರೆ. ಕೊಟ್ಟ ಮೇಲೆ ಅವರ ಕಲ್ಯಾಣವೂ ಆಗಿದೆ. ಇದು ಸಹಕಾರಿ ಬ್ಯಾಂಕ್‍ಗಳ ಕೊಡುಗೆಗಳಲ್ಲಿ ಒಂದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.