ADVERTISEMENT

ಕೋವಿಡ್ 19: ನಿಯಮ ಉಲ್ಲಂಘನೆ ವ್ಯಕ್ತಿಯ ವಿರುದ್ಧ ಎಫ್ ಐಆರ್

​ಪ್ರಜಾವಾಣಿ ವಾರ್ತೆ
Published 11 ಮೇ 2020, 15:59 IST
Last Updated 11 ಮೇ 2020, 15:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಾಗಲಕೋಟೆ: ಕೋವಿಡ್–19 ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆ ಹಾಗೂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಗರದ ಮಸ್ತಾನ್ ಮೆಹಬೂಬ್ ಕಲಾದಗಿ ಎಂಬುವವರು ವಿರುದ್ಧ ಇಲ್ಲಿನ ನವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ರಾಜಸ್ಥಾನ ಅಜ್ಮೀರ್‌ನಿಂದ ಮರಳುವಾಗ ಬೆಳಗಾವಿಯಲ್ಲಿ ಕ್ವಾರೆಂಟೈನ್‌ಗೆ ಒಳಗಾಗಿ ಐಸೊಲೇಶನ್‌‌ನಲ್ಲಿರುವ ತಾಯಿಯನ್ನು ಮೇ 7ರಂದು ಭೇಟಿಯಾಗಲು ಮಸ್ತಾನ್ ತೆರಳಿದ್ದರು. ಅಧಿಕಾರಿಗಳ ಕಣ್ತಪ್ಪಿಸಿ ಜಿಲ್ಲೆಯ ಗಡಿ ದಾಟಿ ಬೆಳಗಾವಿಗೆ ಹೋಗಿ ಅಲ್ಲಿ ತಾಯಿಯೊಂದಿಗೆ ಕೆಲ ಕಾಲ ಕಳೆದಿದ್ದರು ಎನ್ನಲಾಗಿದೆ. ಈಗ ಅವರ ತಾಯಿಗೆ ಕೋವಿಡ್–19 ಸೋಂಕು ದೃಢಪಟ್ಟಿದೆ.

ಮಸ್ತಾನ್‌ ಬೆಳಗಾವಿಗೆ ಹೋಗಿ ಬಂದಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಕ್ವಾರೆಂಟೈನ್‌ಗೆ ಒಳಪಡಿಸಲು ಅವರನ್ನು ಕರೆತರಲು ಮನೆಗೆ ತೆರಳಿದ್ದ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಅಸಹಕಾರ ತೋರಿದ ಆರೋಪದ ಮೇಲೂ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.

ADVERTISEMENT

ಮಹಾರಾಷ್ಟ್ರ, ಆಂಧ್ರದಿಂದ ಬಂದವರಿಗೆ ಕ್ವಾರೆಂಟೈನ್

ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದ ಜಿಲ್ಲೆಗೆ ಮರಳಿದ 47 ಜನರನ್ನು ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದ್ದಾರೆ.

ಸೋಮವಾರ ಜಿಲ್ಲೆಗೆ 118 ಮಂದಿ ವಲಸೆ ಕಾರ್ಮಿಕರು ಹೊರ ರಾಜ್ಯಗಳಿಂದ ಬಂದಿದ್ದಾರೆ. ಅವರಲ್ಲಿ 71 ಮಂದಿಗೆ ಗೋವಾದಿಂದ ಬಂದಿದ್ದಾರೆ. ಎಲ್ಲರನ್ನೂ ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ಕ್ವಾರೆಂಟೈನ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.