ADVERTISEMENT

ಹಳೆಯ ಸೈಕಲ್‌ಗೆ ರೇಸಿಂಗ್ ಬೈಕ್‌ನ‌ ಸ್ಪರ್ಶ!

ಸಾಮಾನ್ಯ ಸೈಕಲ್‌ನಲ್ಲೇ ಅಭ್ಯಾಸ ನಡೆಸಿರುವ ರೊಳ್ಳಿಯ ನಿಜಲಿಂಗಪ್ಪ ಹಳಬರ

ವೆಂಕಟೇಶ ಜಿ.ಎಚ್.
Published 28 ಜುಲೈ 2020, 15:52 IST
Last Updated 28 ಜುಲೈ 2020, 15:52 IST
ಬೀಳಗಿ–ಗದ್ದನಕೇರಿ ಕ್ರಾಸ್ ನಡುವಿನ ಹೆದ್ದಾರಿಯಲ್ಲಿ ತನ್ನ ಸೈಕಲ್‌ನಲ್ಲಿ ಅಭ್ಯಾಸ ನಿರತ ನಿಜಲಿಂಗಪ್ಪ ಹಳಬರ
ಬೀಳಗಿ–ಗದ್ದನಕೇರಿ ಕ್ರಾಸ್ ನಡುವಿನ ಹೆದ್ದಾರಿಯಲ್ಲಿ ತನ್ನ ಸೈಕಲ್‌ನಲ್ಲಿ ಅಭ್ಯಾಸ ನಿರತ ನಿಜಲಿಂಗಪ್ಪ ಹಳಬರ   

ಬಾಗಲಕೋಟೆ: ಬೀಳಗಿ–ಗದ್ದನಕೇರಿ ಕ್ರಾಸ್ ನಡುವಿನ ಹೆದ್ದಾರಿಯಲ್ಲಿ ನಿತ್ಯ ನಸುಕಿನಲ್ಲಿ ಸೈಕಲ್‌ ತುಳಿಯುತ್ತಾ ರಸ್ತೆಯಲ್ಲಿ ಓಡಾಡುವ ವಾಹನಗಳೊಂದಿಗೆ ಆ ಭಾಗದ ಹತ್ತಾರು ಸೈಕ್ಲಿಸ್ಟ್‌ಗಳು ಸ್ಪರ್ಧೆಗಿಳಿಯುತ್ತಾರೆ. ಅವರ ಪೈಕಿ ರೊಳ್ಳಿ ಗ್ರಾಮದ ನಿಜಲಿಂಗಪ್ಪ ಹಳಬರ ಎಲ್ಲರ ಗಮನ ಸೆಳೆಯುತ್ತಾರೆ.

ಹೀಗೆ ಪೆಡಲ್‌ ತುಳಿಯುತ್ತಾ ಬೆವರು ಹರಿಸುವವರು ತರೇಹವಾರಿ ಮಾಡೆಲ್‌ನ ರೇಸಿಂಗ್‌ ಬೈಕ್‌ಗಳ‌ (ಸೈಕಲ್‌) ಸಾರಥಿಗಳಾದರೆ, ನಿಜಲಿಂಗಪ್ಪನದು ಮಾತ್ರ ಹೊಸ ವಿನ್ಯಾಸದಲ್ಲಿ ಕಾಣುವ ಹಳೆಯ ಅಟ್ಲಸ್ ಸೈಕಲ್.

ಬೀಳಗಿ ತಾಲ್ಲೂಕಿನ ರೊಳ್ಳಿ ಗ್ರಾಮದ ಸಿದ್ದಪ್ಪ ಹಳಬರ–ದಂಡವ್ವ ದಂಪತಿ ಪುತ್ರ ನಿಜಲಿಂಗಪ್ಪ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಗ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ರೊಳ್ಳಿ ಹಾಗೂ ಪಕ್ಕದ ಗಿರಿಸಾಗರದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸೈಕ್ಲಿಸ್ಟ್‌ಗಳು ಒಡಮೂಡಿದ್ದು, ಅದೇ ಪ್ರೇರಣೆಯಿಂದ ನಿಜಲಿಂಗಪ್ಪ ತಾವು ಸೈಕ್ಲಿಂಗ್‌ನಲ್ಲಿ ಮಹತ್ತರ ಸಾಧನೆಯ ಕನಸು ಹೊತ್ತಿದ್ದಾರೆ. ಹೀಗಾಗಿ ಕಳೆದ ಮೂರು ತಿಂಗಳಿನಿಂದ ಸೈಕ್ಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಊರಿನ ಹಿರಿಯ ಸೈಕ್ಲಿಸ್ಟ್‌ಗಳ ಅಭ್ಯಾಸದ ರೀತಿ ಗಮನಿಸುತ್ತಾ ಅದೇ ಹಾದಿಯಲ್ಲಿ ಸಾಗಿರುವ ನಿಜಲಿಂಗಪ್ಪನದು ಏಕಲವ್ಯನ ಶ್ರಮ.

ADVERTISEMENT

ಅಪ್ಪ ಸಿದ್ದಪ್ಪನಿಗೆ ಎರಡು ಎಕರೆ ಜಮೀನು ಇದ್ದು, ನಾಲ್ವರು ಮಕ್ಕಳಲ್ಲಿ ನಿಜಲಿಂಗಪ್ಪ ಎರಡನೆಯವರು. ಹಿರಿಯ ಸಹೋದರ ಕುರಿ ಮೇಯಿಸಲು ಹೋಗುತ್ತಾರೆ. ಇನ್ನಿಬ್ಬರು ಶಾಲೆಗೆ ಹೋಗುತ್ತಿದ್ದಾರೆ. ರೇಸಿಂಗ್ ಸೈಕಲ್‌ ಕೊಡಿಸುವಷ್ಟು ಆರ್ಥಿಕ ಚೈತನ್ಯ ಮನೆಯವರಿಗೆ ಇಲ್ಲ ಎಂಬುದು ಅರಿವಾಗಿ ತಾವೇ ಸಾಮಾನ್ಯ ಸೈಕಲನ್ನು ರೇಸಿಂಗ್ ಬೈಕ್ ರೀತಿ ಸಿದ್ಧಪಡಿಸಿಕೊಂಡಿದ್ದಾರೆ.

ಮುಂಜಾನೆ ನಾಲ್ಕು ಗಂಟೆಗೆ ಎದ್ದು ರೊಳ್ಳಿಯಿಂದ ಗದ್ದನಕೇರಿ ಕ್ರಾಸ್‌ವರೆಗೆ ಬಂದು ವಾಪಸ್ ಹೋಗುವ ಅವರು, ನಿತ್ಯ 50 ಕಿ.ಮೀನಷ್ಟು ದೂರ ಕ್ರಮಿಸುತ್ತಾರೆ. ಹೀಗೆ ಅಭ್ಯಾಸ ಮುಂದುವರೆಸಿ ಮುಂದೆ ರಾಜ್ಯಮಟ್ಟದ ರೇಸ್‌ಗಳಲ್ಲಿ ಭಾಗವಹಿಸುವ ಉಮೇದಿ ಹೊಂದಿದ್ದಾರೆ.

ಬೆನ್ನು ತಟ್ಟಿದರು: ನಾಲ್ಕು ದಿನಗಳ ಹಿಂದಷ್ಟೇ ಇದೇ ಹಾದಿಯಲ್ಲಿ ಹೊರಟಿದ್ದ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಡಾ.ಮಹಾಂತೇಶ ಬಿರಾದಾರ ತಮ್ಮಕಾರಿಗಿಂತ ವೇಗವಾಗಿ ಹೊರಟಿದ್ದ ನಿಜಲಿಂಗಪ್ಪನ ಸಾಹಸ ಕಂಡು ಬೆನ್ನು ತಟ್ಟಿದ್ದಾರೆ. ಸೈಕ್ಲಿಂಗ್‌ನಲ್ಲಿ ಮಹತ್ವದ್ದನ್ನು ಸಾಧಿಸುವಂತೆ ಹಾರೈಸಿ ತೆರಳಿದ್ದಾರೆ. ಇದು ನಿಜಲಿಂಗಪ್ಪನ ಉತ್ಸಾಹ ಇಮ್ಮಡಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.