ADVERTISEMENT

ಅಧಿಕಾರಿಗಳು ಸ್ಥಳದಲ್ಲಿದ್ದು ನಿಗಾ ವಹಿಸಿ: ಜಿಲ್ಲಾಧಿಕಾರಿ ಜಾನಕಿ ಸೂಚನೆ

ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 13:51 IST
Last Updated 22 ಜುಲೈ 2024, 13:51 IST
ಆಲಮಟ್ಟಿ ಜಲಾಶಯದ ಕೆಳಭಾಗದಲ್ಲಿರುವ ನದಿ ಪಾತ್ರದ ಹಳ್ಳಿಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು  ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು
ಆಲಮಟ್ಟಿ ಜಲಾಶಯದ ಕೆಳಭಾಗದಲ್ಲಿರುವ ನದಿ ಪಾತ್ರದ ಹಳ್ಳಿಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು  ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು   

ರಾಂಪುರ: 'ಆಲಮಟ್ಟಿ ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾದಲ್ಲಿ ಹಾಗೂ ನಾರಾಯಣಪುರ ಬಸವಸಾಗರ ಜಲಾಶಯದ ಹಿನ್ನೀರಿನಿಂದ ಬಾಧಿತಗೊಳ್ಳಬಹುದಾದ ಬಾಗಲಕೋಟೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೀತಿಮನಿ, ನಾಯನೇಗಲಿ, ಮಂಕಣಿ, ಡೊಮನಾಳ, ಬೊಮ್ಮಣಗಿ, ಮ್ಯಾಗೇರಿ ಗ್ರಾಮಗಳಿಗೆ ಭೇಟಿ ನೀಡಿದ ಅವರು, ನದಿ ಪಾತ್ರದ ಪ್ರದೇಶದ ಸ್ಥಿತಿ–ಗತಿಯ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದರು.

‘ಗ್ರಾಮಗಳ ಹೊರವಲಯದಲ್ಲಿ ನೀರು ನುಗ್ಗಬಹುದಾದ ಪ್ರದೇಶಕ್ಕೆ ಜನರು ತೆರಳಬಾರದು ಹಾಗೂ ಜಾನುವಾರು ಮೇಯಿಸಲು ಆ ಕಡೆ ಹೋಗದಂತೆ ಆಯಾ ಗ್ರಾಮಗಳಲ್ಲಿ ಡಂಗುರ ಸಾರಿಸಬೇಕು. ಜೊತೆಗೆ ನೀರು ಆವರಿಸಬಹುದಾದ ಪ್ರದೇಶಕ್ಕೆ ಹತ್ತಿರವಾಗಿರುವ ಕುಟುಂಬಗಳನ್ನು ಬೇರೆಡೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಎದುರಾಗಬಹುದಾದ ಪರಿಸ್ಥಿತಿ ನಿಭಾಯಿಸಲು ಮುಂಜಾಗ್ರತೆ ವಹಿಸಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನಗಳಲ್ಲಿದ್ದು ಸದಾ ನಿಗಾವಹಿಸಬೇಕು. ನಿತ್ಯ ಮಾಹಿತಿಯನ್ನು ಕಂದಾಯ ಇಲಾಖೆಗೆ ಕಳುಹಿಸಿಕೊಡಬೇಕು’ಎಂದು ಅವರು ತಿಳಿಸಿದರು.

ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ್‌ ಅಮರೇಶ ಪಮ್ಮಾರ, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ, ಕಂದಾಯ ನಿರೀಕ್ಷಕ ಜಯಪ್ರಕಾಶ ಅಳವಂಡಿ, ಪಿಡಿಒಗಳಾದ ಶೌಕತಅಲಿ ಮುರನಾಳ, ಮಂಜುನಾಥ ತಳವಾರ, ಸಂಗನಗೌಡ ಪಾಟೀಲ, ಗ್ರಾಮ ಆಡಳಿತಾಧಿಕಾರಿಗಳಾದ ಶಶಿಕಾಂತ ಪೂಜಾರಿ, ಅಜಯ ಜ್ಯೋತಿ, ಕೆ.ಆರ್.ಯಲ್ಲಪ್ಪ, ಪ್ರೇಮಕುಮಾರ್ ಇದ್ದರು.

ಆಲಮಟ್ಟಿ ಜಲಾಶಯದ ಕೆಳಭಾಗದಲ್ಲಿರುವ ನದಿ ಪಾತ್ರದ ಹಳ್ಳಿಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.  ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.