ADVERTISEMENT

ದೀಪಾವಳಿ: ಮೇರಾ ಆಚರಣೆ  ಸಡಗರ 

ಬಂಜಾರ ಸಮುದಾಯ ವಾಸವಿರುವ ತಾಂಡಾಗಳಲ್ಲಿ ವಿಶೇಷ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 6:31 IST
Last Updated 22 ಅಕ್ಟೋಬರ್ 2025, 6:31 IST
   

ಗುಳೇದಗುಡ್ಡ: ಕತ್ತಲೆ ಕಳೆದು, ಬೆಳಕು ತರುವ ಹಬ್ಬ ದೀಪಾವಳಿಯು ಎಲ್ಲ ಸಮುದಾಯದಲ್ಲಿ ಸಂಭ್ರಮ ತರುತ್ತದೆ. ವಿಶೇಷವಾಗಿ ಬಂಜಾರ ಸಮುದಾಯವು ವಾಸವಾಗಿರುವ ತಾಂಡಾಗಳಲ್ಲಿ ದೀಪಾವಳಿಯಂದು ನಡೆಯುವ ‘ಮೇರಾ’ ಎಂಬ ವಿಶಿಷ್ಠ ಆಚರಣೆ ಗಮನ ಸೆಳೆಯುತ್ತದೆ.

ತಾಲ್ಲೂಕಿನ ಹಾನಾಪೂರ ಎಸ್.ಪಿ., ಹಾನಾಪೂರ ತಾಂಡಾ ಹಾಗೂ ಗುಳೇದಗುಡ್ಡ ತಾಂಡಾ ಮೊದಲಾದೆಡೆ ದೀಪಾವಳಿ ಅಮವಾಸ್ಯೆಯಂದು ಬಂಜಾರ ಅಥವಾ ಲಂಬಾಣಿ ಸಮುದಾಯದವರು ಮೇರಾ ಹಬ್ಬವನ್ನು ತಲೆ ತಲಾಂತರಗಳಿಂದ ಆಚರಿಸಿಕೊಂಡು ಬಂದಿದ್ದಾರೆ. 

ಬಂಜಾರ ಸಮುದಾಯದವರು ಪ್ರತಿವರ್ಷ ದೀಪಾವಳಿ ಹಬ್ಬದಲ್ಲಿ ಮೇರಾ ಆಚರಣೆಯೊಂದಿಗೆ ‘ಗೋದಣ ಪರೆರೋ’ ಎಂಬ ವಿಶೇಷ ಸಂಪ್ರದಾಯವನ್ನು ನಡೆಸುತ್ತಾರೆ. ದೀಪಾವಳಿ ಅಮವಾಸ್ಯೆಯಾದ ಮಂಗಳವಾರ ಸಂಜೆ ಬಂಜಾರ ಸಮುದಾಯಕ್ಕೆ ಸೇರಿದ ಮದುವೆಯಾಗದ ಯುವತಿಯರು ಪ್ರತಿ ಮನೆಗೂ ತೆರಳಿ ಬಂಜಾರ ಸಮುದಾಯದ ಜಾನಪದ ಹಾಡುಗಳನ್ನು ಹಾಡುತ್ತಾ, ಯುವತಿಯರಿಗೆ ಆರತಿ ಮಾಡಿದರು. ಹಾನಾಪೂರ ಎಸ್.ಪಿ, ಎಲ್.ಟಿ. ಗ್ರಾಮದಲ್ಲೂ ಈ ಆಚರಣೆ ನೆರವೇರಿತು.

ADVERTISEMENT

ಬುಧವಾರ ಬಲಿಪಾಡ್ಯಮಿಯಂದು ಬೆಳಿಗ್ಗೆ ಹೊಲಕ್ಕೆ ಹೋಗಿ ಪುಂಡಿ, ಅಣ್ಣಿ, ಗನಜಲಿ ಕಡ್ಡಿ ಸಂಗ್ರಹಿಸಿ ಪಾಂಡವರನ್ನು ಮಾಡಲಾಗುತ್ತದೆ. ಅವುಗಳನ್ನು ಹೂಗಳಿಂದ ಸಿಂಗರಿಸಲಾಗುತ್ತದೆ. ನಂತರ, ಎಲ್ಲ ಯುವತಿಯರು ಒಂದೆಡೆ ಸೇರಿ ವಿಶೇಷವಾದ ತಿನಿಸು ಸಿದ್ದಪಡಿಸಿ, ಎಲ್ಲರೂ ಸವಿಯುತ್ತಾರೆ. ಬಂಜಾರರ ಸಾಂಪ್ರದಾಯಿಕ ನೃತ್ಯ ಮಾಡಿ, ಸಂಭ್ರಮಿಸುತ್ತಾರೆ. ಗ್ರಾಮದ ಎಲ್ಲ ಯುವತಿಯರು ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಹಿನ್ನೆಲೆ: ‘ಮೇರಾ ಎಂದರೆ ಗ್ರಾಮಸ್ಥರ ಪ್ರಕಾರ ಲಕ್ಷ್ಮಿ ಎಂದರ್ಥ. ದೀಪಾವಳಿ ಅಮವಾಸ್ಯೆ ದಿನ ತಮ್ಮ ಭಾಗದ  ಮುಖಂಡನ ಮನೆಗೆ ಎಲ್ಲ ಯುವತಿಯರು ತೆರಳಿ, ಮೇರಾ ಆರಂಭಿಸುತ್ತಾರೆ. ಮೊದಲು ಮುಖಂಡನ ಮನೆಯಲ್ಲಿರುವ ಯುವತಿಗೆ, ಲಕ್ಷ್ಮಿ ಎಂದು ಆರತಿ ಮಾಡುತ್ತಾರೆ. ನಂತರ ಕನಿಷ್ಠ ಮೂರು ತಾಸು ಎಲ್ಲರ ಮನೆಗೆ ತೆರಳಿ ಮನೆ ಮಂದಿಯ ಹೆಸರು ಹೇಳಿ, ಜನಪದ ಹಾಡು ಹಾಡುತ್ತ ನೃತ್ಯ ಮಾಡುತ್ತಾರೆ’ ಎಂದು ಹಾನಾಪೂರ ಎಸ್.ಪಿ. ಗ್ರಾಮದ ಲಂಬಾಣಿ ಸಮುದಾಯದ ಗಣಪತಿ ನೆಲ್ಲೂರ ಹೇಳುತ್ತಾರೆ.

‘ಮದುವೆ ನಿಶ್ಚಯ ಆಗಿರುವ ಯುವತಿಯರು ಈ ಆಚರಣೆಯ್ಲಿ ಪಾಲ್ಗೊಳ್ಳುವುದಿಲ್ಲ. ಇದು ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದ ಪರಂಪರೆ’ ಎಂದರು.

ಪರಂಪರೆಯಿಂದ ಬಂದ ಮೇರಾ ಹಬ್ಬ ಮುಂದಿನ ತಲೆಮಾರಿಗೆ ಪರಿಚಯಿಸುವ ಅವಶ್ಯಕತೆ ಇದೆ
ಶಂಕರ ಮುಂದಿನಮನಿ,ಲಂಬಾಣಿ ಸಮುದಾಯದ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.