ಬನಹಟ್ಟಿಯ ಮಂಗಳವಾರ ಪೇಟೆ ನೀಲಕಂಠೇಶ್ವರ ಮಠದ ಹತ್ತಿರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿದೆ
ರಬಕವಿ ಬನಹಟ್ಟಿ: ಬನಹಟ್ಟಿಯಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡುವ ಯೋಜನೆ ಆರಂಭವಾಗಿ ಎಂಟು ವರ್ಷಗಳಾದರೂ ಯಶಸ್ವಿಯಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಪರಿಣಾಮ ಜನರಿಗೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ.
ರಬಕವಿ–ಬನಹಟ್ಟಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲು 2017–18ರಲ್ಲಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಾಯಿತು. ಮೊದಲ ಹಂತವಾಗಿ ಬನಹಟ್ಟಿಯಲ್ಲಿ ₹16 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಯಿತು. ಯೋಜನೆ ಸಂಪೂರ್ಣ ವಿಫಲವಾಗಿರುವುದರಿಂದ ಮನೆಗಳಿಗೆ ನೀರು ಪೂರೈಸಲು ಅಳವಡಿಸಿದ್ದ ನಳಗಳು, ಅವುಗಳಿಗೆ ಅಳವಡಿಸಿದ್ದ ಮೀಟರ್ ಡಬ್ಬಿಗಳು ಹಾಳಾಗಿವೆ. ಕೋಟ್ಯಂತರ ರೂಪಾಯಿ ಹಣ ಪೋಲಾಗಿದೆ.
ಬನಹಟ್ಟಿಯಲ್ಲಿ ವಿಫಲವಾದ ಯೋಜನೆಯನ್ನು ರಬಕವಿಯಲ್ಲಿ ಜಾರಿಗೊಳಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ರಬಕವಿ ನಗರಸಭೆಯ ಸದಸ್ಯರು ಮತ್ತು ಸಾರ್ವಜನಿಕರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ, ಯೋಜನೆ ಆರಂಭಿಸಲಾಗಿದೆ.
ನಿರ್ಹಣೆಯಾಗದ ಶುದ್ಧ ಕುಡಿಯುವ ನೀರಿನ ಘಟಕಗಳು: ರಬಕವಿ ಬನಹಟ್ಟಿಯಲ್ಲಿ 16ಕ್ಕೂ ಹೆಚ್ಚು ನಗರಸಭೆಯ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಜೊತೆಗೆ ಹತ್ತಾರು ಖಾಸಗಿ ಘಟಕಗಳು ಇಲ್ಲಿವೆ.
ಬನಹಟ್ಟಿಯಲ್ಲಿ ನಾಲ್ಕು ಘಟಕಗಳು ಸಂಪೂರ್ಣವಾಗಿ ಬಂದ್ ಆಗಿವೆ. ಈ ಭಾಗದ ಜನರು ಖಾಸಗಿ ಘಟಕಗಳನ್ನು ಅವಲಂಬಿಸಿದ್ದಾರೆ. ನಗರದ ನೀಲಕಂಠೇಶ್ವರ ಮಠದ ಹತ್ತಿರದ ಅಂದಾಜು ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕವು ಒಂದು ಹನಿ ನೀರು ನೀಡದೆ ನಗರಸಭೆಯ ಅಧಿಕಾರಿಗಳ ನಿರ್ಲಕ್ಷದಿಂದ ಹಾಳಾಗಿದೆ. ಇಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ.
ರಬಕವಿಯಲ್ಲಿ ನಗರಸಭೆ ಒಂದೆರಡು ಘಟಕಗಳು ಮಾತ್ರ ಇರುವುದರಿಂದ ಇಲ್ಲಿಯ ಜನರು ಖಾಸಗಿ ಘಟಕಗಳನ್ನು ಅವಲಂಬಿಸಿದ್ದಾರೆ. ಖಾಸಗಿಯವರು ದುಪ್ಪಟ್ಟು ಬೆಲೆಗೆ ನೀರು ನೀಡುತ್ತಿದ್ದಾರೆ. ಇದು ಆರ್ಥಿಕವಾಗಿಯೂ ಹೊರೆಯಾಗಿದೆ.
ಮಹಾಲಿಂಗಪುರದಲ್ಲಿ ಬೇಸಿಗೆಯ ಸಂದರ್ಭದಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳಿದ್ದು, ಈಗ ಮಳೆಯಾಗುತ್ತಿದ್ದು, ಕೆರೆಗಳು ತುಂಬಿದ್ದು ಮತ್ತು ಘಟಪ್ರಭಾ ನದಿಯು ಹರಿಯುತ್ತಿರುವುದರಿಂದ ಈ ಭಾಗದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ.
ಗ್ರಾಮೀಣ ಪ್ರದೇಶದ ಜಗದಾಳ, ನಾವಲಗಿ ಮತ್ತು ಯಲ್ಲಟ್ಟಿಗಳ ಗ್ರಾಮಗಳಲ್ಲಿ ಸಮಪರ್ಕವಾಗಿ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೊಳವೆಬಾವಿಗಳ ಅವಶ್ಯಕತೆ ಇದೆ ಎನ್ನುತ್ತಾರೆ ನಾವಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಕಾಂತಿ, ಯಲ್ಲಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಮೋಪಗಾರ.
ರಬಕವಿ ಬನಹಟ್ಟಿ ತಾಲ್ಲೂಕಿನ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಹರಿಯುತ್ತವೆ. ಜಿಎಲ್‌ಬಿಸಿ ಕಾಲುವೆಯಿಂದಾಗಿ ಕೆರೆಗಳು ತುಂಬಿರುತ್ತವೆ. ಆದರೆ, ಆ ನೀರನ್ನು ಸರಿಯಾಗಿ ತಲುಪಿಸವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಖಾಸಗಿ ಘಟಕಗಳು ಪೂರೈಕೆ ಮಾಡುವ ನೀರಿನ ಗುಣಮಟ್ಟದ ಪರಿಶೀಲನೆ ನಡೆಯುತ್ತಿಲ್ಲ. ಪರಿಶೀಲನೆ ಮಾಡಬೇಕು-ಬಸವರಾಜ ಗುಡೋಡಗಿ, ಸದಸ್ಯ ನಗರಸಭೆ ರಬಕವಿ–ಬನಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.