ADVERTISEMENT

ಕುಂಟುತ್ತ ಸಾಗಿರುವ ತೋದಲಬಾಗಿ-ಚಿಕ್ಕಲಕಿ ಏತ ನೀರಾವರಿ ಯೋಜನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:06 IST
Last Updated 4 ಮಾರ್ಚ್ 2026, 5:06 IST
ಜಮಖಂಡಿ: ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ ಅರ್ಧಕ್ಕೆ ನೀತಿರುವದು.
ಜಮಖಂಡಿ: ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ ಅರ್ಧಕ್ಕೆ ನೀತಿರುವದು.   

ಜಮಖಂಡಿ: ಕಳೆದ 12 ವರ್ಷಗಳಿಂದ ನಡೆಯುತ್ತಿರುವ ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ (ತೋದಲಬಾಗಿ-ಚಿಕ್ಕಲಕಿ ಏತ ನೀರಾವರಿ ಯೋಜನೆ) ನೀರಿಗಾಗಿ ರೈತರು ರಾಮನಿಗಾಗಿ ಶಬರಿ ಕಾದಂತೆ ಕಾಯುತ್ತಿದ್ದಾರೆ ಆದರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.

₹48 ಕೋಟಿ ವೆಚ್ಚದಲ್ಲಿ 5 ಸಾವಿರ ಎಕರೆ ಜಮೀನಿಗೆ 8 ತಿಂಗಳ ಕಾಲ ನೀರಾವರಿ ಕಲ್ಪಿಸಲು 2013ರಲ್ಲಿ ಈ ಯೋಜನೆಗೆ ಭೂಮಿಪೂಜೆ ನಡೆದಿದೆ. ಜಮಖಂಡಿ ತಾಲ್ಲೂಕಿನ ತೊದಲಬಾಗಿ, ಚಿಕ್ಕಲಕಿ, ಬಿದರಿ, ಜನವಾಡ ಹಾಗೂ ವಿಜಯಪುರ ಜಿಲ್ಲೆಯ ಅರ್ಜುನಗಿ ಗ್ರಾಮಗಳ ರೈತರಿಗೆ ಈ ಯೋಜನೆಯಿಂದ ಅನುಕೂಲವಾಗುತ್ತದೆ.

ಜನವಾಡ ಹತ್ತಿರದ ಕೃಷ್ಣಾ ನದಿಯಿಂದ 7 ಕಿ.ಮೀ ಅಂತರದಲ್ಲಿನ ಎಕ್ಕಲಮಟ್ಟಿವರೆಗೆ ಪೈಪ್‌ಲೈನ್ ಮೂಲಕ ನೀರು ತಂದು ಅಲ್ಲಿಂದ ಕೆನಲ್ ಮೂಲಕ ರೈತರ ಜಮೀನುಗಳಿಗೆ ನೀರು ಕೊಡುವ ಯೋಜನೆಯಾಗಿದೆ.

ADVERTISEMENT

ವಿಜಯಪುರ ಜಿಲ್ಲೆಯ ದೇವರಗೆಣ್ಣೂರದಿಂದ ವಿದ್ಯುತ್ ತರಲು ಇನ್ನೂ ಶೇ 25ರಷ್ಟು ಕಂಬಗಳನ್ನು ಅಳವಡಿಸಬೇಕು. ಅಲ್ಲಿ ವಿದ್ಯುತ್‌ ಪರಿವರ್ತಕ ಅಳವಡಿಸಬೇಕು. ಜನವಾಡ ಹತ್ತಿರದ ಕೃಷ್ಣಾ ನದಿಯಿಂದ ನೀರು ಎತ್ತಲು 1600 ಎಚ್.ಪಿಯ ಮೂರು ಮೋಟರ್ ಅಳವಡಿಸಬೇಕಿದೆ.

ಸರ್ಕಾರ ಈ ಯೋಜನೆಗೆ ಹಣ ನೀಡಿದ್ದರೂ, ಹಣಕಾಸಿನ ತೊಂದರೆ ಇಲ್ಲದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇನ್ನೂ 300 ಮೀಟರ್ ಪೈಪ್‌ಲೈನ್ ಮಾಡಬೇಕು. ಶೇ 50ರಷ್ಟು ಕೆನಲ್ ಕಾಮಗಾರಿ ಆಗಬೇಕಿದೆ. ಕೂಡಲೇ ಅಧಿಕಾರಿಗಳು ಪೂರ್ಣಗೊಳಿಸಬೇಕು ಎಂದು ಜೋತಿಬಾ ಚೌಹಾನ ಒತ್ತಾಯಿಸಿದ್ದಾರೆ.

‘ಈ ಮೊದಲು ಮಾಡಿರುವ ಕಾಮಗಾರಿಯೂ ಹಾಳಾಗುತ್ತಿದೆ. ಮೊದಲಿನ ಗುತ್ತಿಗೆದಾರರು ಬಿಟ್ಟು ಹೋಗಿದ್ದಾರೆ. ಇಗ ಬೇರೆಯವರಿಗೆ ತುಂಡು ಗುತ್ತಿಗೆ ನೀಡುತ್ತೇವೆ ಎಂದು ಎರಡು ವರ್ಷಗಳಿಂದ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅದು ಕಾರ್ಯರೂಪಕ್ಕೆ ಮಾತ್ರ ಬರುತ್ತಿಲ್ಲ’ ಎಂದು ರೈತ ಮುಖಂಡ ರಾಮಪ್ಪ ಕರಜಗಿ ಹೇಳಿದರು.

‘2013ರಲ್ಲಿ ಕಾಮಗಾರಿ ಆರಂಭವಾಗಿದೆ. ಆದರೆ ಇಲ್ಲಿಯವರೆಗೆ ಇನ್ನೂ ಭೂಮಿ ಅವಾರ್ಡ್‌ ರೈತರಿಗೆ ಬಂದಿಲ್ಲ. ನೀರಿನ ಆಸೆಗಾಗಿ ಸರ್ಕಾರ ನಂತರ ಅವಾರ್ಡ್‌ ಮಾಡಿ ಹಣ ನೀಡಲಿ ಎಂದು ಜಮೀನು ನೀಡಿದ್ದೇವೆ. ಇತ್ತ ನೀರೂ ಇಲ್ಲ ಜಮೀನು, ಹಣವೂ ಇಲ್ಲದಂತಾಗಿದೆ’ ಎಂದು ರೈತ ಸಿದ್ಧರಾಯ ಸನಸಿದ ಬೇಸರ ವ್ಯಕ್ತ ಪಡಿಸಿದರು.

ಜಮಖಂಡಿ: ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ ಅರ್ಧಕ್ಕೆ ನೀತಿರುವದು.
ಜಮಖಂಡಿ: ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ ಅರ್ಧಕ್ಕೆ ನೀತಿರುವದು.

‘3 ತಿಂಗಳಲ್ಲಿ ಯೋಜನೆ ಪೂರ್ಣ’

ಗುತ್ತಿಗೆದಾರರು ಬಿಟ್ಟು ಹೋಗಿರುವುದರಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈಗ ₹ 3.62 ಕೋಟಿಗೆ ಟೆಂಡರ್ ಕರೆಯಲಾಗಿದೆ. 3 ತಿಂಗಳಲ್ಲಿ ಈ ಯೋಜನೆಯನ್ನು ಪೂರ್ಣ ಮುಗಿಸಿ ರೈತರಿಗೆ ನೀರು ಕೊಡಲಾಗುವುದು’ ಎಂದು ವಿಜಯಪುರ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಶಾಂತಪ್ಪ ಕೋಳಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.