ಬಾಗಲಕೋಟೆ: ‘ಚುನಾವಣೆ ಆಯೋಗಕ್ಕೆ ಸೆಡ್ಡು ಹೊಡೆದು ಇವಿಎಂ ಬದಲಿಗೆ ಮತಪತ್ರಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದು ಸರಿಯಾಗಿದೆ. ಇವಿಎಂ ಮೇಲೆ ನಮಗೆ ನಂಬಿಕೆ ಇಲ್ಲ’ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಇವಿಎಂ ಮೇಲೆ ಜನರಿಗೆ ಅಪನಂಬಿಕೆ ಬಂದಿದೆ. ಕಾಂಗ್ರೆಸ್ ಅವಧಿಯಲ್ಲಿಯೇ ಇವಿಎಂ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾವೇ ಇವಿಎಂ ಜಾರಿಗೊಳಿಸಿದ್ದರೂ ಅದನ್ನು ದುರುಪಯೋಗ ಮಾಡಿಕೊಳ್ಳಿ ಎಂದು ಹೇಳಿದ್ದೆವಾ’ ಎಂದು ಪ್ರಶ್ನಿಸಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪದ್ಧತಿ ಮೇಲೆ ಅಪನಂಬಿಕೆ, ಆರೋಪ ಕೇಳಿಬಂದಾಗ ಅದನ್ನು ಸರಿಪಡಿಸುವ ಕೆಲಸ ಆಗಬೇಕು. ಆದರೆ, ಕೇಂದ್ರ ಸರ್ಕಾರಕ್ಕೆ ಅದಕ್ಕೆ ಒಪ್ಪುತ್ತಿಲ್ಲ’ ಎಂದರು.
ಜಿಎಸ್‍ಟಿ ಹೆಚ್ಚಿಸಿದ್ದು ತಪ್ಪು ಎನ್ನಲಿ: ‘ಕೇಂದ್ರ ಸರ್ಕಾರ ಸರಕು ಸೇವಾ ತೆರಿಗೆ(ಜಿಎಸ್‍ಟಿ) ಸ್ಲ್ಯಾಬ್‍ಗಳಲ್ಲಿ ಬದಲಾವಣೆ ಮಾಡಿ, ಜನರಿಗೆ ದೀಪಾವಳಿ ಉಡುಗೊರೆ ಎನ್ನುತ್ತಿದೆ. ಇವರೇ ಜಿಎಸ್‍ಟಿ ಹೆಚ್ಚಿಸಿ, ಈಗ ಕಡಿಮೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಮೊದಲು ಹೆಚ್ಚಿಸಿದ್ದು ತಮ್ಮ ತಪ್ಪು ಎಂದು ಒಪ್ಪಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಜಿಎಸ್‍ಟಿ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಬೆಂಬಲದ ಅನುದಾನ ಕೊಡುತ್ತಿಲ್ಲ ಎಂದು ಆರೋಪಿಸಿದ ಅವರು, ಚುನಾವಣೆ ಬಂದಾಗ ಒಂದೊಂದು ರೀತಿ ಡ್ರಾಮಾ ಮಾಡುತ್ತಾರೆ ಎಂದರು.
ಬಿಹಾರ ಚುನಾವಣೆಯಿಂದಾಗಿ ಪ್ರಧಾನಮಂತ್ರಿ ಆಧಾರರಹಿತ ಮಾತುಗಳನ್ನು ಆಡುತ್ತಿರುವುದು ಬೇಸರ ತಂದಿದೆ. ಚುನಾವಣೆ ಗಿಮಿಕ್‍ಗಾಗಿ ಬೇರೆ ಪಕ್ಷಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದನ್ನು ನೋಡಿದರೆ ಪ್ರಧಾನಮಂತ್ರಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ಅಭಿಪ್ರಯಾಪಟ್ಟರು.
ಧರ್ಮಸ್ಥಳದಲ್ಲಿ ಯಾರದ್ದೋ ಮಾತು ಕೇಳಿ ಎಸ್‍ಐಟಿ ರಚಿಸಿ, ತನಿಖೆ ಕೈಗೊಂಡಿದ್ದಲ್ಲ. ಧರ್ಮಸ್ಥಳದ ಬಗ್ಗೆ ನಮಗೂ ಭಾವನಾತ್ಮಕವಾಗಿ ನಂಟಿದೆ. ಆರೋಪಗಳು ಬಂದಾಗ ಸರ್ಕಾರ ಈ ಬಗ್ಗೆ ತನಿಖೆ ಮಾಡಿಸಬೇಕಾಗುತ್ತದೆ. ತನಿಖೆ ಮಾಡಿದ್ದರಿಂದಲೇ ಸತ್ಯ ಗೊತ್ತಾಗಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಬಗ್ಗೆ ಕೆಟ್ಟ ಹೆಸರು ಬರಬಾರದು ಎಂದು ತನಿಖೆ ಮಾಡಿಸಿದೆ ಎಂದು ಸಮರ್ಥಿಸಿಕೊಂಡರು.
ಕೆ.ಎನ್. ರಾಜಣ್ಣ ಪ್ರಕರಣಲ್ಲಿ ಏನಾಗಿದೆಯೋ ನಮಗೆ ಗೊತ್ತಿಲ್ಲ. ಅದು ಹೈಕಮಾಂಡ್ ನಿರ್ಧಾರ ಎಂದರು.
ಸೆ.12ಕ್ಕೆ ಸಭೆ ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಲ್ಲಿ ಮುಳುಗಡೆ ಆಗುವ ಜಮೀನುಗಳಿಗೆ ಏಕರೂಪದ ಬೆಲೆ ನಿರ್ಧಾರ ಮಾಡಲು ಸೆ.12ಕ್ಕೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ಮಾಡಿ ಒಂದು ಹಂತದವರೆಗೆ ಚರ್ಚೆ ಮಾಡಲಾಗಿದೆ. ಪ್ರತಿ ಎಕರೆಗೆ ₹50 ಲಕ್ಷ ಕೊಡಬೇಕು ಎಂದು ಕೋರಿದ್ದೇವೆ. ರೈತರಿಗೆ ನ್ಯಾಯ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು. ಈಗಾಗಲೇ ಮುಳುಗಡೆ ಆಗಲಿರುವ ಜಮೀನುಗಳ ಉತಾರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಎಂದು ಕೂಡಿಸಿದ್ದರಿಂದ ರೈತರಿಗೆ ಸಾಕಷ್ಟು ತೊಂದರೆ ಆಗಿದ್ದು ಈ ಕೂಡಲೇ ಉತಾರದಲ್ಲಿ ಹೆಸರು ತೆಗೆಯಬೇಕು ಎಂದು ಸ್ಪಷ್ಟ ಸೂಚನೆ ಕೊಡಲಾಗಿದೆ. ಸ್ವಾಧೀನ ಪಡಿಸಿಕೊಂಡ ಬಳಿಕ ಉತಾರದಲ್ಲಿ ನಮೂದಿಸಲು ತಿಳಿಸಿದ್ದೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.