
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿರುವ ಮೆಣಸಿನಕಾಯಿ ರಾಷ್ಟ್ರೀಯ ಸಮ್ಮೇಳನವನ್ನು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ ಉದ್ಘಾಟಿಸಿದರು
ಬಾಗಲಕೋಟೆ: ಬೇರೆ ದೇಶಗಳಿಗೆ ಹೋಲಿಸಿದರೆ ಕೃಷಿ ಸಂಶೋಧನೆಗೆ ನೀಡುವ ಅನುದಾನ ಕಡಿಮೆ ಇದ್ದು, ಹೆಚ್ಚಳವಾಗಬೇಕು. ಸಂಶೋಧನೆ ಮೂಲಕ ರೈತರ ಆದಾಯ ಹೆಚ್ಚಿಸುವ ಕೆಲಸ ಆಗಬೇಕಿದೆ’ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಭಾರತೀಯ ತೋಟಗಾರಿಕೆ ಅಕಾಡೆಮಿ, ಅಡ್ವಾನ್ಸಡ್ ಟ್ರೇನಿಂಗ್ ಇನ್ ಪ್ಲಾಂಟ್ ಬ್ರೀಡಿಂಗ್ ಸಹಯೋಗದಲ್ಲಿ ಸೋಮವಾರ ಆರಂಭವಾದ ಮೆಣಸಿನಕಾಯಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮೆಣಸಿನಕಾಯಿ ಬೆಳೆಯುವ ಪ್ರದೇಶ ಹೆಚ್ಚಿದ್ದರೂ, ಉತ್ಪಾದನೆ ಪ್ರಮಾಣದಲ್ಲಿ ಕಡಿಮೆ ಇದೆ. ಪ್ರತಿ ಹೆಕ್ಟೇರ್ ಇಳುವರಿ ಹೆಚ್ಚಿಸಿದಾಗಲೇ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ’ ಎಂದರು.
‘ಗುಣಮಟ್ಟದ ಬೀಜ, ಮಣ್ಣು ಹಾಗೂ ನೀರು ನಿರ್ವಹಣೆ, ಔಷಧ, ಕಾಸ್ಮೆಟಿಕ್ಸ್ ತಯಾರಿಕೆಗೆ ಕಳುಹಿಸುವ ಮೂಲಕ ಮೌಲ್ಯವರ್ಧನೆ ಕಾರ್ಯ ಆಗಬೇಕು. ಗುಣಮಟ್ಟದ ಜತೆಗೆ ಇಳುವರಿ ಹೆಚ್ಚಿಸುವ ಕೆಲಸ ಆಗಬೇಕು. ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
‘ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಕ್ಷೇತ್ರದ ಬಹುತೇಕ ಬೆಳೆಗಳ ಮೇಲೆ ಪರಿಣಾಮವಾಗುತ್ತಿದೆ. ಗುಣಮಟ್ಟ ಹಾಗೂ ಇಳುವರಿ ಪ್ರಮಾಣಕ್ಕೆ ಆತಂಕ ಎದುರಾಗಿದೆ. ರಾಸಾಯನಿಕ ಔಷಧಗಳ ಬಳಕೆಯೂ ಕಡಿಮೆಯಾಗಬೇಕು. ನೈಸರ್ಗಿಕವಾಗಿ ಭಾರತ ಉತ್ತಮ ಹವಾಮಾನ, ವೈವಿದ್ಯ ಮಣ್ಣು, ಮಳೆ ಎಲ್ಲವನ್ನೂ ಹೊಂದಿದೆ. ಅದರ ಲಾಭ ಪಡೆಯುವ ಕೆಲಸ ಆಗಬೇಕಿದೆ’ ಎಂದರು.
‘ವಿಶ್ವದ ಶೇ 80ರಷ್ಟು ಕೃಷಿ ಉತ್ಪಾದನೆಯಲ್ಲಿ ಭಾರತ ಮೊದಲ ಐದು ಸ್ಥಾನಗಳಲ್ಲಿ ಒಂದು ಸ್ಥಾನ ಹೊಂದಿದೆ. ಇಳುವರಿ ಮಾತ್ರ ಕಡಿಮೆಯಿದೆ. ಆಹಾರ ಭದ್ರತೆಗೂ ಆದ್ಯತೆ ಸಿಗಬೇಕು. ರೈತರನ್ನು ಉದ್ಯಮಿಯಾಗಿಸುವ ಮೂಲಕ ದೇಶದ ಆರ್ಥಿಕತೆ ಸಬಲಗೊಳಿಸಬೇಕಿದೆ’ ಎಂದು ಹೇಳಿದರು.
ನವದೆಹಲಿ ಐಸಿಎಸ್‍ಆರ್ ಮಾಜಿ ಡಿಡಿಜಿ ಎನ್.ಕೆ. ಕೃಷ್ಣಕುಮಾರ ಮಾತನಾಡಿ, ‘ಮೆಣಸಿನಕಾಯಿ ಬೆಳೆಗೆ ವಿವಿಧ ರೋಗಗಳು ಕಾಡುತ್ತಿವೆ. ಸಂಶೋಧನೆ ಮೂಲಕ ನಿವಾರಣೆ ಮಾಡಬೇಕು. ಹೆಚ್ಚಿನ ಔಷಧಗಳ ಬಳಕೆಯಿಂದಾಗಿ ರಫ್ತು ಮಾಡಿದ ಮೆಣಸಿಕಾಯಿ ತಿರಸ್ಕಾರಗೊಳ್ಳುತ್ತಿದೆ. ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಗುಣಮಟ್ಟ ಕಾಪಾಡುವ ಕೆಲಸ ಆಗಬೇಕು’ ಎಂದರು.
ಔರಂಗಾಬಾದ್‌ನ ಎಟಿಪಿಬಿಆರ್ ನಿರ್ದೇಶಕ ಸುರಿಂದರ್ ಟಿಕೂ ಮಾತನಾಡಿ, ‘ಈ ಮೊದಲು ಕೃಷಿ ಉತ್ಪನ್ನಗಳನ್ನು ಋತುಮಾನ ತಕ್ಕಂತೆ ಬೆಳೆಯುಲಾಗುತ್ತಿತ್ತು. ಈಗ ಎಲ್ಲ ಸಮಯದಲ್ಲಿ ಬೆಳೆಯಬಹುದಾಗಿದೆ. ತಂತ್ರಜ್ಞಾನದ ಲಾಭ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಭಾರತೀಯ ತೋಟಗಾರಿಕೆ ಅಕಾಡೆಮಿ ಲೋಗೊ ಬಿಡುಗಡೆ ಮಾಡಲಾಡಲಾಯಿತು. ತೋವಿವಿ ಸಂಶೋಧನಾ ನಿರ್ದೇಶಕ ಬಿ.ಪಕ್ರುದ್ದೀನ್, ಪ್ರೊ. ವಸಂತ ಗಾಣಿಗೇರ ಇದ್ದರು.
ಆರು ತಳಿಯ ಮೆಣಸಿನಕಾಯಿ ಬಿಡುಗಡೆ
ಅಧ್ಯಕ್ಷತೆ ವಹಿಸಿದ್ದ ತೋವಿವಿ ಕುಲಪತಿ ವಿಷ್ಣುವರ್ಧನ ಮಾತನಾಡಿ ‘ಕೃಷ್ಣಪ್ರಭಾ ರುದ್ರ ಕೃಷ್ಣಪ್ರಭಾ ಶಂಕರ ಸಿದ್ಧ-1 ಮತ್ತು 2 ಸೇರಿದಂತೆ ಆರು ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಿರಂತರವಾಗಿ ನಡೆಯಲಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.