ತೇರದಾಳ: ರಾಸಾಯನಿಕ ಕೃಷಿ ತೊರೆದು 10 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತ ಆದಾಯ, ಆರೋಗ್ಯ ಸುಧಾರಣೆ ಜೊತೆಗೆ ಇತರ ರೈತರಿಗೆ ತಾಲ್ಲೂಕಿನ ಸಸಾಲಟ್ಟಿಯ ರೈತ ಪರಪ್ಪ ಮಾಲಗಾಂವಿ ಮಾದರಿಯಾಗಿದ್ದಾರೆ.
15 ಎಕರೆ ಜಮೀನಿನಲ್ಲಿ ನಾಲ್ಕು ಎಕರೆ ಗೋವಿನ ಜೋಳ, ಮೂರು ಎಕರೆ ಅರಿಸಿಣ ಹಾಗೂ ಉಳಿದ ಜಮೀನಿನಲ್ಲಿ ಕಬ್ಬು ಜೊತೆಗೆ ಮನೆಗೆ ಬೇಕಾಗುವಷ್ಟು ಶೇಂಗಾ ತರಕಾರಿಗಳಾದ ಹಿರೇಕಾಯಿ, ಬದನೆಕಾಯಿ, ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಸೊಪ್ಪು ಬೆಳೆಯುತ್ತಿದ್ದಾರೆ.
ಮಾವು, ಪೇರಲ, ಡ್ರ್ಯಾಗನ್, ಸಪೋಟದಂತಹ ಹಣ್ಣಿನ ಗಿಡಗಳನ್ನು ಬೆಳೆಯುತ್ತಿದ್ದಾರೆ. ಪುತ್ರ ಪವನಕುಮಾರ, ಸಹೋದರ ಸಂಗಣ್ಣ ಹಾಗೂ ಅವರ ಮಕ್ಕಳಾದ ಮಲ್ಲು, ಬಸವರಾಜ ಕೂಡ ಇವರಿಗೆ ನೆರವಾಗಿದ್ದಾರೆ. ಆರಂಭದ ಎರಡು ವರ್ಷ ಶೇ50ರಷ್ಟು ರಾಸಾಯನಿಕ ಬಳಸಿ ಕ್ರಮೇಣ ಕೈಬಿಟ್ಟಿದ್ದಾರೆ.
ವ್ಯವಸಾಯಕ್ಕೆ ಪೂರಕವಾಗುವಂತೆ ಗೀರ್ ತಳಿಯ ಐದು ಹಸು, ಒಂದು ಕಿಲಾರಿ ಹಸು, ಮೂರು ಎಮ್ಮೆ ಹಾಗೂ ಏಳು ಮೇಕೆಗಳನ್ನು ಸಾಕಿದ್ದಾರೆ. ಇವುಗಳ ಸಗಣಿ, ಹಿಕ್ಕೆ ಹಾಗೂ ಗೋಮೂತ್ರ ಬಳಸಿ ಡಿ ಕಾಂಪೋಸ್ಟ್, ಗೋಕೃಪಾಮೃತ, ಎರೆಗೊಬ್ಬರ, ಎರೆಜಲ ತಯಾರಿಸಿ ಬಳಸುತ್ತಾರೆ.
ಹನಿ ನೀರಾವರಿ ಮೂಲಕ ಬೆಳೆಗಳಿಗೆ ಬಳಸುತ್ತಿದ್ದಾರೆ. ಇದರಿಂದ ಕೂಲಿಯಾಳುಗಳು ಬೇಕಾಗುವುದಿಲ್ಲ, ಸಮಯದ ಉಳಿತಾಯದ ಜೊತೆ ಉತ್ತಮ ಇಳುವರಿಗೆ ಅನುಕೂಲವಾಗುತ್ತದೆ. ಬಾವಿ, ಕೊಳವೆ ಬಾವಿಯ ಜತೆಗೆ ಕೃಷಿ ಹೊಂಡದ ನೀರನ್ನೂ ಬಳಸುತ್ತಾರೆ.
ಗೋವಿನ ಜೋಳಕ್ಕೆ ಗರಿ ಮೂಡಿದ ಮೇಲೆ ಕೀಟದ ಬಾಧೆ ಸಾಮಾನ್ಯವಾಗಿದ್ದು, ರಾಸಾಯನಿಕ ಸಿಂಪರಣೆಯೊಂದೇ ಪರಿಹಾರ ಎಂಬುದು ಹಲವರ ಭಾವನೆ. ಸಾವಯವದ ದ್ರವ ಸಿಂಪರಣೆಯಿಂದ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎನ್ನುತ್ತಾರೆ ಪರಪ್ಪ ಮಾಲಗಾಂವಿ.
ಸಾವಯವ ಕೃಷಿಯಿಂದ ಭೂಮಿ ಫಲವತ್ತತೆ ಉಳಿಯುವುದಲ್ಲದೇ, ಖರ್ಚೂ ಕಡಿಮೆಯಾಗುತ್ತದೆ. ರಾಸಾಯನಿಕ ಗೊಬ್ಬರ ಬಳಸಿ ಕಬ್ಬು ಬೆಳೆಯಲು ₹15ರಿಂದ 20 ಸಾವಿರ, ಅರಿಸಿಣಕ್ಕೆ ₹1 ಲಕ್ಷ, ಹಾಗೂ ಗೋವಿನಜೋಳಕ್ಕೆ ₹5-6 ಸಾವಿರ ಖರ್ಚಾಗುತ್ತದೆ.
ಸಾವಯವ ಪದ್ಧತಿಯಲ್ಲಿ ಬೆಳೆದರೆ ಕಬ್ಬಿಗೆ ₹5 ಸಾವಿರ, ಅರಿಸಿಣಕ್ಕೆ ₹8-10 ಸಾವಿರ, ಗೋವಿನ ಜೋಳಕ್ಕೆ ₹1 ಸಾವಿರ ಖರ್ಚಾಗುತ್ತದೆ ಎಂಬ ಲೆಕ್ಕಾಚಾರ ಇವರದು.
ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುವ ಬೆಳೆಗಳಿಗೆ ಪ್ರತ್ಯೇಕ ಬೆಲೆ ನಿಗದಿಯಾಗಬೇಕು ಎಂಬುದು ಇವರ ಆಗ್ರಹ. ಕೃಷಿ ಇಲಾಖೆ 2022-23ನೇ ಸಾಲಿನ ‘ಆತ್ಮ ಶ್ರೇಷ್ಠ ಕೃಷಿಕ’ ಪ್ರಶಸ್ತಿ ನೀಡಿ ಗೌರವಿಸಿದೆ.
ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತ ಸಮಯ ಉಳಿತಾಯದ ಜೊತೆ ಇಳುವರಿಗೆ ಅನುಕೂಲ ಬಾವಿ, ಕೊಳವೆ ಬಾವಿ, ಕೃಷಿಹೊಂಡದ ನೀರು ಬಳಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.