ADVERTISEMENT

ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ವಿವಿಧ ಸಂಘಟನೆಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 16:43 IST
Last Updated 25 ಸೆಪ್ಟೆಂಬರ್ 2020, 16:43 IST
ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ವೇದವ್ಯಾಸ ಮುತಾಲಿಕರಿಗೆ ಮನವಿ ಸಲ್ಲಿಸಲಾಯಿತು
ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ವೇದವ್ಯಾಸ ಮುತಾಲಿಕರಿಗೆ ಮನವಿ ಸಲ್ಲಿಸಲಾಯಿತು   

ಇಳಕಲ್: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಚೆಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ರಾಷ್ಟ್ರೀಯ ಹೆದ್ದಾರಿ 50 ಅನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ ವೇದವ್ಯಾಸ ಮುತಾಲಿಕ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು, ಕೃಷಿ ಕಾರ್ಮಿಕರು ಬೀದಿಗೆ ಬರುವ ಅಪಾಯವಿದೆ. ಕಾರ್ಮಿಕ ಕಾಯ್ದೆಯು ಕಂಪನಿಗಳ ಮಾಲೀಕರು ಮತ್ತು
ಆಡಳಿತ ಮಂಡಳಿಯವರು ಸ್ವೇಚ್ಛಾಚಾರದಿಂದ ವರ್ತಿಸಲು ಅನುವು ಮಾಡಿಕೊಡುತ್ತದೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತರ ಜಮೀನುಗಳನ್ನು ಬಲವಂತದಿಂದ ಮಾರಾಟ ಮಾಡುವಂತೆ ಮಾಡುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಹಾಗೂ ಕಾರ್ಮಿಕ ವಿರೋಧಿಯಾಗಿವೆ ಎಂದು ಆರೋಪಿಸಿದರು.

ರೈತ ಮುಖಂಡ ಮಲ್ಲನಗೌಡ ತುಂಬದ ಮಾತನಾಡಿ, ಸರ್ಕಾರಗಳು ಈಚೆಗೆ ರೈತರಿಗೆ ಹಾಗೂ ಕಾರ್ಮಿಕರಿಗೆ ಸಂಬಂಧಿಸಿದಂತೆ ತಂದಿರುವ ಕಾಯ್ದೆಗಳು ಮಾರಕವಾಗಿವೆ. ಆದರೆ ಕಾಯ್ದೆಯ ಪರಿಣಾಮ ರೈತರ ಅಭಿವೃದ್ದಿ ಆಗಲಿದೆ ಎಂದು ಸುಳ್ಳು ಮಾಹಿತಿ
ನೀಡಿ ರೈತರ ದಾರಿ ತಪ್ಪಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇಂದು ಭಾರತೀಯ ಕಿಸಾನ ಸಂಘ ಹಾಗೂ ಮತ್ತಿತರ ಸಂಘಟನೆಗಳು ನೀಡಿರುವ ರಾಷ್ಟ್ರೀಯ ಹೆದ್ದಾರಿ ಬಂದ್ ಕರೆಗೆ ಇಲ್ಲಿಯ ರೈತ ಸಂಘವು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಸರ್ಕಾರಗಳು ಜಾರಿಗೊಳಿಸಿರುವ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿವೆ. ಕಾಯ್ದೆಗಳನ್ನು ಹಿಂದಕ್ಕೆ ಪಡೆಯದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ಕೃಷ್ಣ ಜಾಲಿಹಾಳ ಎಚ್ಚರಿಸಿದರು. 1 ಗಂಟೆ ನಡೆದ ಹೆದ್ದಾರಿ ತಡೆಯಿಂದ ಬಸವೇಶ್ವರ ವೃತ್ತದಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಪ್ರತಿಭಟನೆಯಲ್ಲಿ ವೀರಣ್ಣ ಬಡಿಗೇರ, ಬಸನಗೌಡ ಪಾಟೀಲ, ರಾಮನಗೌಡ ಪಾಟೀಲ, ಶ್ರೀನಿವಾಸ ಮೇಟಿ, ಶರಣು ಕುರಿ, ಮಲ್ಲಪ್ಪ ಮಾದರ, ಟ್ಯಾಕ್ಸಿ ಚಾಲಕರ ಹಾಗೂ ಮಾಲಿಕರ ಸಂಘದ ಚಂದ್ರಶೇಖರ ಬೆಣ್ಣಿಹಾಳ, ಕರವೇ ಅಶೋಕ ಪೂಜಾರಿ, ಜಯ ಕರ್ನಾಟಕ ಸಂಘದ ಗಂಗಾಧರ ಅಂಗಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.