ADVERTISEMENT

ಜಮಖಂಡಿ: ಕುರಿಗಳೊಂದಿಗೆ ರೈತರ ಪ್ರತಿಭಟನೆ

ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:02 IST
Last Updated 10 ಜುಲೈ 2025, 4:02 IST
ಜಮಖಂಡಿಯ ಆಡಳಿತ ಸೌಧದ ಮುಂದೆ ಕುರಿಗಾಹಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಜಮಖಂಡಿಯ ಆಡಳಿತ ಸೌಧದ ಮುಂದೆ ಕುರಿಗಾಹಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಜಮಖಂಡಿ: ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣೆ ಕಾಯ್ದೆ ರೂಪಿಸಿ(ರಕ್ಷಣೆ ಹಾಗೂ ದೌರ್ಜನ್ಯ ತಡೆ) ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕುರಿಗಾಹಿಗಳು ಹಾಗೂ ಮುಖಂಡರು ನಗರದ ದೇಸಾಯಿ ವೃತ್ತದಿಂದ ಬುಧವಾರ ಕುರಿಗಳ ಜೊತೆ ತಾಲ್ಲೂಕು ಆಡಳಿತ ಸೌಧದವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಮುಖಂಡ ಅರ್ಜುನ ದಳವಾಯಿ ಮಾತನಾಡಿ, ’ಕುರಿಗಾರರ ಮೇಲೆ ನಿರಂತರ ದೌರ್ಜನ್ಯ, ಹಲ್ಲೆ, ಜೀವ ಬೇದರಿಕೆ, ಕೊಲೆ, ಅತ್ಯಾಚಾರ, ಕುರಿ ಕಳ್ಳತನ, ಅರಣ್ಯಾಧಿಕಾರಿಗಳ ಲಂಚದ ಬೇಡಿಕೆ ಅಧಿಕ ಪ್ರಮಾಣದಲ್ಲಿ ನಡೆಯುತ್ತಿವೆ. ಸರ್ಕಾರವು ಎಲ್ಲ ವರ್ಗದ ಮಹಿಳೆಯರ ಪರ, ಮಕ್ಕಳ ಪರ, ಶೋಷಿತ ಸಮುದಾಗಳ ಪರ ಹಾಗೂ ವಿವಿಧ ವೃತ್ತಿಪರರ ಹಿತರಕ್ಷಣೆಗೆ ವಿಶೇಷ ಕಾಯ್ದೆಗಳನ್ನು ಜಾರಿ ಮಾಡಿ ಅವರ ರಕ್ಷಣೆ ಮಾಡಬೇಕು’ ಎಂದರು.

ಮುಖಂಡ ಹೂವಪ್ಪ ಉಷಾಕರ ಮಾತನಾಡಿ, ‘ಗುಡ್ಡುಗಾಡು ಪ್ರದೇಶಗಳಲ್ಲಿ ಕುರಿ ಮೇಯಿಸಲು ಹೋದಾಗ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಹಾಗೂ ಸಿಬ್ಬಂದಿಗಳಿಂದ ನಿರಂತರ ಕಿರುಕುಳ, ದೌರ್ಜನ್ಯ ನಡೆಯುತ್ತಿವೆ, ಕುರಿಗಾರಿಕೆ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿ ನಿಭಾಯಿಸುವ ಸಾಂಪ್ರದಾಯಿಕ ಕುಲ ಕಸಬಾಗಿದೆ, ಬೆಟ್ಟ-ಗುಡ್ಡಗಳನ್ನು ಒಳಗೊಂಡಂತೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯವಾಗಿ ಹಾಗೂ ಸಂಚರಿಸುವ ಮೂಲಕ ಪಾಲನೆ ಮಾಡುತ್ತಿದ್ದು, ಬಡವರ ಪಾಲಿಗೆ ಕುರಿಗಾರಿಕೆ ವರದಾನವಾದೆ’ ಎಂದು ತಿಳಿಸಿದರು.

ADVERTISEMENT

ಮುಖಂಡ ಯಲ್ಲಪ್ಪ ಹೆಗಡೆ ಮಾತನಾಡಿ, ‘ಈಚೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಉಗಲವಾಟ ಗ್ರಾಮದ ಕುರಿಗಾಯಿ ಶರಣಪ್ಪ ಚಿಮ್ಮನಕಟ್ಟಿ, ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನ ಕುರಿಗಾಯಿ ಪ್ರಭು ಮೇತ್ರಿ ಅವರನ್ನು ಕುರಿಗಳ್ಳರು ಕೊಲೆ ಮಾಡಿದ್ದು ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನಲ್ಲಿ ಲಕ್ಷ್ಮೀ ಕಳ್ಳಮನಿ ಎಂಬ ಕುರಿಗಾಯಿ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ನಿದರ್ಶನಗಳು ನಮ್ಮ ಮುಂದಿವೆ’ ಎಂದರು.

ಹಣಮಂತ ಯಮಗಾರ, ನಾಗಪ್ಪ ಹೆಗಡೆ, ಸಂತೋಷ ಮಮದಾಪೂರ, ಹಣಮಂತ ಮಗದೂಮ್, ಪರಶು ಚಿಗರಿ, ಪ್ರಲ್ಹಾದ ಭಜಂತ್ರಿ, ರಾಜು ನದಾಪ್ ಸೇರಿದಂತೆ ಇತರರು ಇದ್ದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ’ಕುರಿ ಕಾಯಲು ಕುರಿಗಾಹಿಗಳಿಗೆ ಸರ್ಕಾರ ಅನುಕೂಲ ಮಾಡಬೇಕು. ಅರಣ್ಯ ಪ್ರದೇಶದಲ್ಲಿ ಬಿಟ್ಟರೆ ಅರಣ್ಯ ಇಲಾಖೆಯವರು ತೊಂದರೆ ಮಾಡುತ್ತಿದ್ದಾರೆ, ಆದ್ದರಿಂದ ಸರ್ಕಾರ ಶಾಶ್ವತ ಪರಿಹಾರ ನೀಡಬೇಕು. ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆಯವರ ಜೊತೆ ಮಾತನಾಡಿ ಶಾಶ್ವತ ಪರಿಹಾರಕ್ಕೆ ಮನವಿ ಮಾಡಲಾಗುವುದು, ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು’ ಎಂದರು.

ಜಮಖಂಡಿಯ ಆಡಳಿತ ಸೌಧದ ಮುಂದೆ ಕುರಿಗಾಹಿಗಳು ಕುರಿಯ ಜೊತೆಗೆ ಪ್ರತಿಭಟನೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.