ADVERTISEMENT

ಬಾಗಲಕೋಟೆ: ಉಳ್ಳಾಗಡ್ಡಿಗೆ ರೋಗ, ಹೆಸರುಕಾಳು ಕೊಳೆಯುವ ಆತಂಕ

ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 3:59 IST
Last Updated 18 ಆಗಸ್ಟ್ 2025, 3:59 IST
ಮಳೆಯಿಂದಾಗಿ ಮುದುಡಿ ಹೋಗಿರುವ ಹೆಸರುಕಾಳು ಬೆಳೆ
ಮಳೆಯಿಂದಾಗಿ ಮುದುಡಿ ಹೋಗಿರುವ ಹೆಸರುಕಾಳು ಬೆಳೆ   

ಬಾಗಲಕೋಟೆ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಳ್ಳಾಗಡ್ಡಿಗೆ ರೋಗ ಹೆಚ್ಚಾಗಿದ್ದರೆ, ಹೆಸರುಕಾಳು ಬೆಳೆಯಲ್ಲಿ ಬಿಡಿಸುವ ಹಂತಕ್ಕೆ ಬಂದಿದ್ದ ಬುಡ್ಡಿ ಬಿಡಿಸಲಾಗದೇ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಉಳಾಗಡ್ಡಿ ಬೆಳೆಯ ಬೀಜಗಳನ್ನು ಚೆಲ್ಲುವ ಪದ್ಧತಿಯಲ್ಲಿ ಬೆಳೆಯಲಾಗುತ್ತದೆ. ಇದರಿಂದ ಸಸಿಗಳ ಸಾಂದ್ರತೆಯಲ್ಲಿ ಏರುಪೇರಾಗಿದ್ದು, ಇದರಿಂದ ರೋಗ ಮತ್ತು ಕೀಟಗಳ ಬಾಧೆ ಹೆಚ್ಚಾಗಿರುತ್ತದೆ. ಅದಲ್ಲದೇ ಮೋಡ ಕವಿದ ವಾತಾವರಣ ಮತ್ತು ಮಳೆ ಆಗುತ್ತಿರುವುದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗುತ್ತಿದ್ದು, ಹೊಲಗಳಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ಕೂಡ ರೋಗ ಬಾಧೆ ಉಲ್ಬಣವಾಗಿರುತ್ತದೆ.

ಉಳ್ಳಾಗಡ್ಡಿ ಬೆಳೆಗೆ ಪ್ರಮುಖವಾಗಿ ತಿರುಗುಣಿ ರೋಗ, ಬೂಜೂತುಪ್ಪಟ ರೋಗ (ಡೌನಿ ರೋಗ) ನೇರಳೆ ಮಚ್ಚೆರೋಗ ಹಾಗೂ ಗಡ್ಡೆಕೊಳೆ ರೋಗ (ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾ) ಬಾಧಿಸುವ ಸಾಧ್ಯತೆಗಳು ಹೆಚ್ಚಿರುವುದರಿಂದ ರೈತರು ನಿರ್ವಹಣೆಗೆ ಮುಂದಾಗಬೇಕಿದೆ.

ADVERTISEMENT

ಸಸಿಗಳ ಸಾಂದ್ರತೆ (ಹೆಚ್ಚು ಸಸಿಗಳ ಜಾಗ) ಇರುವ ಜಾಗದಲ್ಲಿ ಹೆಚ್ಚುವರಿ ಸಸಿಗಳನ್ನು ತೆಗೆಯಬೇಕು. ನೀರು ನಿಲ್ಲದಂತೆ ಹರಿದು ಹೋಗಲು ವ್ಯವಸ್ಥೆ ಮಾಡಬೇಕು ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ವೆಂಕಟೇಶಲು ತಿಳಿಸಿದ್ದಾರೆ.

ಗೆಡ್ಡೆ ಕೊಳೆಯುವ ರೋಗ ಕಂಡುಬಂದಲ್ಲಿ 100 ಕೆ.ಜಿ. ಕೊಟ್ಟಿಗೆ ಗೊಬ್ಬರದ (ತಿಪ್ಪೆ ಗೊಬ್ಬರ) ಜೊತೆಗೆ  ಗುಣಮಟ್ಟದ ಜೈವಿಕ ಪೀಡೆನಾಶಕಗಳಾದ ಟ್ರೈಕೊಡರ್ಮಾ 3 ಕೆ.ಜಿ, ಸುಡೊಮೊನಾಸ್‌ ಅನ್ನು 3 ಕೆ.ಜಿ  ಮಿಶ್ರಣ ಮಾಡಿ ಮೇಲುಗೊಬ್ಬರವಾಗಿ ಪ್ರತಿ ಎಕರೆಗೆ ಹಾಕಬೇಕು. ಅಥವಾ 5 ಲೀಟರ್ ಆನಿಯನ್ ಸ್ಪೆಷಲ್ ಜೈವಿಕ ಗೊಬ್ಬರಗಳ ಮಿಶ್ರಣವನ್ನು ಪ್ರತಿ ಎಕರೆಗೆ ಡ್ರೆಚಿಂಗ್ ಮೂಲಕ ಒದಗಿಸಬೇಕು ಎಂದಿದ್ದಾರೆ.

ಸುರುಳಿರೋಗ ಅಥವಾ ತಿರುಗುಣಿ ರೋಗ ಬಾಧೆ ಕಂಡುಬಂದಲ್ಲಿ ಅಜಾಕ್ಸಿಸ್ಟ್ರೋಬಿಬ್, ಟೆಬುಕೊನೊಜೋಲ್  1 ಮಿಲಿ ಪ್ರತಿ ಲೀಟರ್ ನೀರಿಗೆ ಅಥವಾ ಟೆಬುಕೊನಾಜೋಲ್, ಟ್ರೈಪ್ಲಾಕ್ಸಿಸ್ಟೋಬಿನ್ 0.5 ಗ್ರಾಂ ಪ್ರತಿ ಲೀಟರ್ ನೀರನ್ನು ಶಿಲೀಂಧ್ರನಾಶಕದ ಜೊತೆಗೆ ಬೊರಾನ್ ಮಿಶ್ರಿತ ಲಘು ಪೋಷಕಾಂಶಗಳನ್ನು 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ 10 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಬೇಕು ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಹೆಸರುಕಾಳು ಬುಡ್ಡಿ (ಹೆಸರುಕಾಳಿನ ಕಾಯಿ) ಬಿಡಿಸಬೇಕಾದ ಸಮಯದಲ್ಲಿ ಸತತವಾಗಿ ಮಳೆ ಬರುತ್ತಿರುವುದರಿಂದ ಬಿಡಿಸಲು ಸಾಧ್ಯವಾಗುತ್ತಿಲ್ಲ. ಮಳೆ ಹೆಚ್ಚಾದರೆ, ಬಳ್ಳಿ ಹಾಗೂ ಕಾಯಿ ಕೊಳೆಯುವ ಆತಂಕ ರೈತರನ್ನು ಕಾಡುತ್ತಿದೆ.

ಮಳೆ ಹೆಚ್ಚಾದರೆ ಹೊಲದಲ್ಲಿ ನೀರು ಸತತವಾಗಿ ನಿಲ್ಲದಂತೆ ನೋಡಿಕೊಳ್ಳಬೇಕು. ವಿಜ್ಞಾನಿಗಳ ಸಲಹೆ ಪಡೆದು ಕೀಟನಾಶಕಗಳ ಸಿಂಪಡಣೆ ಮಾಡಬೇಕು
ವೆಂಕಟೇಶಲು ವಿಸ್ತರಣಾ ನಿರ್ದೇಶಕ ತೋವಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.