ADVERTISEMENT

ಬಾಗಲಕೋಟೆ | ಭ್ರೂಣಹತ್ಯೆ ಪ್ರಕರಣ: ಮೂರನೇ ಸಲ ಸಿಕ್ಕಿಬಿದ್ದ ಆರೋಪಿ

ಬಸವರಾಜ ಹವಾಲ್ದಾರ
Published 30 ಮೇ 2024, 23:48 IST
Last Updated 30 ಮೇ 2024, 23:48 IST
<div class="paragraphs"><p>ಮಹಾಲಿಂಗಪುರದ ಕವಿತಾ ಬಾಡನವರ ಮನೆ ಮೇಲೆ 2022ರಲ್ಲಿ ದಾಳಿ ನಡೆಸಿದ ವೇಳೆ ಕವಿತಾ ವಿಚಾರಣೆ ಮಾಡುತ್ತಿರುವ ಅಂದಿನ ಡಿಎಚ್‌ಒ ಡಾ.ಜಯಶ್ರೀ</p><p></p></div>

ಮಹಾಲಿಂಗಪುರದ ಕವಿತಾ ಬಾಡನವರ ಮನೆ ಮೇಲೆ 2022ರಲ್ಲಿ ದಾಳಿ ನಡೆಸಿದ ವೇಳೆ ಕವಿತಾ ವಿಚಾರಣೆ ಮಾಡುತ್ತಿರುವ ಅಂದಿನ ಡಿಎಚ್‌ಒ ಡಾ.ಜಯಶ್ರೀ

   

ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದಲ್ಲಿ ಭ್ರೂಣಹತ್ಯೆ ಆರೋಪದ ಮೇಲೆ ಬಂಧಿತೆಯಾದ ಕವಿತಾ ಬಾಡನವರ ಓದಿದ್ದು ಪಿಯುಸಿ. ‘ತಜ್ಞೆ’ ಎಂದೇ ಬಿಂಬಿಸಿಕೊಂಡು ಭ್ರೂಣಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು ಮೂರನೇ ಸಲ.

ADVERTISEMENT

‘ಮನೆಯಲ್ಲೇ ಸುಸಜ್ಜಿತ ವೈದ್ಯಕೀಯ ಕೊಠಡಿ ಹಾಗೂ ಔಷಧಗಳನ್ನು ಹೊಂದಿರುವ ಕವಿತಾ ಭ್ರೂಣಹತ್ಯೆಯಂಥ ಕೃತ್ಯದಲ್ಲಿ ತೊಡಗಿರುವುದು ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿದೆ. ಕೆಲ ವರ್ಷಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ‘ಆಯಾ’ ಆಗಿ ಕೆಲಸ ಮಾಡಿದ್ದು,  ಜೊತೆಗೆ ಹೊರ ಹಾಗೂ ರಾಜ್ಯದ ವೈದ್ಯರೊಂದಿಗೆ ನಂಟಿನಿಂದ ಇದೆಲ್ಲವೂ ಸಾಧ್ಯವಾಗಿದೆ’ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.

ಗರ್ಭಪಾತಕ್ಕೆ ಬೇಕಾದ ಸಲಕರಣೆಗಳ ಜೊತೆಗೆ, ಕೃತಕ ಹೆರಿಗೆ ನೋವು ಬರಿಸುವ ಮಾತ್ರೆ, ಗರ್ಭಪಾತಕ್ಕೆ ನೀಡುವ ಇಂಜೆಕ್ಷನ್‌, ಆ್ಯಂಟಿ ಬಯೋಟಿಕ್‌ ಗುಳಿಗೆ, ನೋವು ನಿವಾರಕ ಸೇರಿದಂತೆ ಹಲವು ಬಗೆಯ ಔಷಧಗಳು ಪತ್ತೆಯಾಗಿವೆ.

ಮಹಾರಾಷ್ಟ್ರದ ನಂಟು: ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದ ಕವಿತಾ ಅಲ್ಲಿಯೇ ಪಿಯುಸಿ ಓದಿ, ಮದುವೆ ಬಳಿಕ ಪತಿಯ ಊರು ಮಹಾಲಿಂಗಪುರಕ್ಕೆ ಬಂದು ನೆಲೆಸಿದರು. ಭ್ರೂಣಹತ್ಯೆಗೆ ಸಂಬಂಧಿಸಿದಂತೆ ಎರಡು ಬಾರಿ ದಾಳಿಯಾದ ಬಳಿಕ ರಾಜ್ಯದ ಗರ್ಭಿಣಿಯರ ಬದಲು ಮಹಾರಾಷ್ಟ್ರದ ಗರ್ಭಿಣಿಯರನ್ನು ಗರ್ಭಪಾತಕ್ಕೆ ಗುರಿಯಾಗಿಸಿಕೊಂಡಿದ್ದು ಗೊತ್ತಾಗಿದೆ.

2019, 2022ರಲ್ಲಿ ಭ್ರೂಣಹತ್ಯೆ ಆರೋಪದ ಮೇಲೆ ಮನೆಯ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಸುಮ್ಮನಿದ್ದ ಕವಿತಾ ನಂತರ ಮತ್ತೆ ಭ್ರೂಣಹತ್ಯೆಯಲ್ಲಿ ತೊಡಗಿಸಿಕೊಂಡಿರುವುದು, ಕೊಲ್ಹಾಪುರ ಜಿಲ್ಲೆಯ ಅಳತೆ ಗ್ರಾಮದ ಸೋನಾಲಿ ಕದಮ್‌ ಸಾವಿನ ಮೂಲಕ ಖಚಿತವಾಗಿದೆ.

‘ಮರಾಠಿ ಭಾಷೆ ಗೊತ್ತಿದ್ದ ಕಾರಣ ಮಹಾರಾಷ್ಟ್ರದ ಗರ್ಭಿಣಿಯರ ಸಂಪರ್ಕ ಸುಲಭವಾಗಿತ್ತು. ಸೊಲ್ಲಾಪುರ, ಜತ್ತ, ಇಚಲಕರಂಜಿ, ಕೊಲ್ಹಾಪುರ ಕಾರ್ಯಕ್ಷೇತ್ರವಾಗಿತ್ತು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಡಿಎಚ್‌ಒ ಸೇರಿ ಐವರಿಗೆ ನೋಟಿಸ್

ಮಹಾಲಿಂಗಪುರದಲ್ಲಿ ನಡೆದ ಭ್ರೂಣಹತ್ಯೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ಸೇರಿ ಐವರಿಗೆ ಕಾರಣ ಕೇಳಿ ನೋಟಿಸ್‌ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ನೀಡಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಕುಮಾರ ಯರಗಲ್, ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ. ಪಟ್ಟಣಶೆಟ್ಟಿ, ಜಿಲ್ಲಾ ಆಸ್ಪತ್ರೆಯ ರೇಡಿಯಾಲಜಿಸ್ಟ್ ಡಾ.ಅನಿಲ ಕಾನಡೆ, ರಬಕವಿ–ಬನಹಟ್ಟಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗೈಬುಸಾಬ್‌ ಗಲಗಲಿ ಅವರಿಗೆ 24 ಗಂಟೆಗಳಲ್ಲಿ ಉತ್ತರಿಸಲು ಸೂಚಿಸಿದ್ದಾರೆ.

‘ಮಹಾಲಿಂಗಪುರದಲ್ಲಿ ಭ್ರೂಣಹತ್ಯೆಯ ಜತೆಗೆ ಗರ್ಭಿಣಿ ಮೃತಪಟ್ಟಿದ್ದಾರೆ.  ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ ಸಕ್ಷಮ ಪ್ರಾಧಿಕಾರದಿಂದ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಇಲಾಖೆ ಕೆಲಸದಲ್ಲಿ ಬೇಜವಾಬ್ದಾರಿ ಮತ್ತು ಕರ್ತವ್ಯ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.