ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ): ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಂಡ ಆರೋಪದ ಮೇಲೆ ಭ್ರೂಣ ಹತ್ಯೆಯ ಆರೋಪಿ ಕವಿತಾ ಬಾಡನವರ ಅವರ ಮನೆ ಗೋಡೆಗೆ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಬುಧವಾರ ನೋಟಿಸ್ ಅಂಟಿಸಿದ್ದಾರೆ.
‘ಪುರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಲಾಗಿದೆ. ಕಟ್ಟಡ ಹಾಗೂ ಪುರಸಭೆ ಆಸ್ತಿ ದಾಖಲೆ ಪರಿಶೀಲಿಸಿದಾಗ, ಮೂರನೇ ಮಹಡಿವರೆಗೂ ವಾಸಕ್ಕೆ ಎಂದು ಅನಧಿಕೃತವಾಗಿ ಕಟ್ಟಡ ನಿರ್ಮಿಸಲಾಗಿದೆ. ನೆಲ ಮತ್ತು ಮೊದಲ ಮಹಡಿಗೆ ಮಾತ್ರ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಿದ್ದು ಕಂಡುಬಂದಿದೆ’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಈ ಕಟ್ಟಡದಲ್ಲಿ 2022ರಲ್ಲಿ ಹಾಗೂ ಕಳೆದ ಮೇ 29 ರಂದು ಕ್ರಿಮಿನಲ್ ಚಟುವಟಿಕೆ ನಡೆದಿದೆ. ಹೀಗಾಗಿ, ಆಸ್ತಿಗೆ ಸಂಬಂಧಿಸಿದಂತೆ ಕಟ್ಟಡ ಪರವಾನಗಿ ಮತ್ತು ಆಸ್ತಿ ಮಾಲೀಕತ್ವದ ದಾಖಲೆಗಳನ್ನು ಈ ನೋಟಿಸ್ ತಲುಪಿದ 15 ದಿನದೊಳಗೆ ಖುದ್ದಾಗಿ ಕಚೇರಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಜಿಲ್ಲಾ ಆರೋಗ್ಯ ಅಧಿಕಾರಿಗೆ ಪತ್ರ ಬರೆದಿರುವ ಪುರಸಭೆ ಮುಖ್ಯಾಧಿಕಾರಿ, ‘ಗರ್ಭಪಾತ ಮತ್ತು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ 2019 ಮತ್ತು 2022ರಲ್ಲಿ ತಮ್ಮ ಇಲಾಖೆಯಿಂದ ವಿಚಾರಣೆ ಮತ್ತು ಮನೆ ಮೇಲೆ ದಾಳಿ ಮಾಡಲಾಗಿದೆ. ಈ ಪ್ರಕರಣಗಳ ಕುರಿತು ಪುರಸಭೆಗೆ ಈವರೆಗೆ ಯಾವುದೇ ಮಾಹಿತಿ ಸಲ್ಲಿಸಿಲ್ಲ ಏಕೆ? ತಾವು ಈ ಹಿಂದೆ ನಡೆದ ಮತ್ತು ಪ್ರಸ್ತುತ ಪ್ರಕರಣಗಳ ಕುರಿತು ಸವಿಸ್ತಾರ ಮಾಹಿತಿ ತಕ್ಷಣ ಸಲ್ಲಿಸಬೇಕು’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.