ADVERTISEMENT

ಗುಳೇದಗುಡ್ಡ: ಅಂಕಗಳಿಕೆಯಲ್ಲಿ ಸದಾ ಮುಂದೆ!

ಗುಣಮಟ್ಟದ ಶಿಕ್ಷಣಕ್ಕೆ ಮಾದರಿ: ಬಾಲಕಿಯರ ಸರ್ಕಾರಿ ಪ್ರೌಢಶಾಲೆ

ಅಖಂಡೇಶ್ವರ ಎಂ.ಪತ್ತಾರ
Published 13 ಡಿಸೆಂಬರ್ 2019, 12:49 IST
Last Updated 13 ಡಿಸೆಂಬರ್ 2019, 12:49 IST
ಗುಳೇದಗುಡ್ಡ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಪಾಸಾಗಲು ಪ್ರತಿಜ್ಞೆ ಸ್ವೀಕರಿಸುತ್ತಿರುವ ಚಿತ್ರ.
ಗುಳೇದಗುಡ್ಡ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಪಾಸಾಗಲು ಪ್ರತಿಜ್ಞೆ ಸ್ವೀಕರಿಸುತ್ತಿರುವ ಚಿತ್ರ.   

ಗುಳೇದಗುಡ್ಡ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅಲ್ಲಿ ‘ಇಲ್ಲ’ಗಳದ್ದೇ ಕಾರುಬಾರು ಎಂಬುದು ಸಾಮಾನ್ಯ ನಂಬಿಕೆ. ಹೀಗಾಗಿ ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನದ ಯುಗದಲ್ಲಿ ಈ ಕಾರಣದಿಂದಲೇ ಮಕ್ಕಳನ್ನು ಸರ್ಕಾರಿ ಶಾಲೆ-ಕಾಲೇಜುಗಳಿಗೆ ಸೇರಿಸಲುಹೆತ್ತವರು ಹಿಂದೇಟು ಹಾಕುತ್ತಾರೆ .

ಆದರೆ ಗುಳೇದಗುಡ್ಡದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇದೆಲ್ಲದಕ್ಕೂ ಅಪವಾದ ಎಂಬಂತೆ ಇದೆ. ಇಲ್ಲಿನ ಗುಣಮಟ್ಟದ ಶಿಕ್ಷಣ, ಶಾಲೆಯನ್ನು ಜಿಲ್ಲೆಯ ಮಾದರಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ತಂದುಕೊಟ್ಟಿದೆ. ಈ ಪ್ರೌಢಶಾಲೆ ಸುಮಾರು 500 ವಿದ್ಯಾರ್ಥಿನಿಯರನ್ನು ಹೊಂದಿದೆ. ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯರು ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿದ್ದಾರೆ.

ಅವರಲ್ಲಿ ಸ್ನೇಹಾ ನೇಮದಿ 2015ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಎಂಟನೇ ಸ್ಥಾನ.2016ರಲ್ಲಿ ಸ್ನೇಹಾ ಬ್ಯಾಳಿ ಬಾದಾಮಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅತಿ ಹೆಚ್ಚು ಅಂಕ ಪಡೆದವರಿಗೆ ಶಿಕ್ಷಣ ಇಲಾಖೆ ನೀಡುವ ಲ್ಯಾಪ್‌ಟಾಪ್ಸತತ ಮೂರು ವರ್ಷ ಈ ಶಾಲೆಯ ವಿದ್ಯಾರ್ಥಿನಿಯರ ಪಾಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ನಾಲ್ವರು ಪಡೆದಿದ್ದಾರೆ ಎಂದು ಶಾಲೆಯ ಉಪಪ್ರಾಚಾರ್ಯ ಮನೋಹರ ಎಂ. ಚಲವಾದಿ ಹೇಳುತ್ತಾರೆ.

ADVERTISEMENT

ಶಾಲೆ ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೇ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಿದೆ. ಶಿಕ್ಷಕಿ ಎಲ್.ಪಿ. ಗುಗ್ಗರಿಗೌಡರ, ಲತಾ ಎಸ್.ಪತ್ತಾರ ಮಾರ್ಗದರ್ಶನದಲ್ಲಿ ಅಣುಕು ಸಂಸತ್ತು ಸ್ಪರ್ಧೆಯಲ್ಲಿ ಸ್ನೇಹಾ ಬ್ಯಾಳಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ದೈಹಿಕ ಶಿಕ್ಷಕ ಜಿ. ಎಂ.ವಡಗೇರಿ ತರಬೇತಿ ಫಲವಾಗಿ ಕ್ರೀಡೆಯಲ್ಲೂ ಮೂಂಚೂಣಿಯಲ್ಲಿದ್ದಾರೆ.

ಶಾಲೆಯಲ್ಲಿ ಎನ್.ಎಸ್.ಎಸ್ ಯೋಜನಾ ಘಟಕ ಹೊಂದಿದ್ದು. ನಿರಂತರವಾಗಿ ಕಾರ್ಯಚಟುವಟಿಕೆ ನಡೆಯುತ್ತಿವೆ. ಕಳೆದ ವರ್ಷದಿಂದ ಈ ಶಾಲೆ ಮಾಹಿತಿ ತಂತ್ರಜ್ಞಾನ ಮತ್ತು ಬ್ಯೂಟಿ ಅಂಡ್‌ ವೆಲ್‌ನೆಸ್‌ ವೃತ್ತಿಪರ ಕೋರ್ಸ್‌ಗಳನ್ನು ನಡೆಸಿಕೊಂಡು ಬರುತ್ತಿದೆ. ಶಾಲೆಯಲ್ಲಿ 3 ಸ್ಮಾರ್ಟ್ ಕ್ಲಾಸ್‌ಗಳಿವೆ. ಕಂಪ್ಯೂಟರ್ ಇವೆ. ಪ್ರತಿ ವರ್ಷ ’ಜಿಜ್ಞಾಸೆ‘ ಎಂಬ ವಸ್ತು ಪ್ರದರ್ಶನ ಆಯೋಜಿಸಲಾಗುತ್ತಿದೆ.

ಶಾಲೆಯ ಉಪಪ್ರಾಚಾರ್ಯ ಮನೋಹರ ಎಂ. ಚಲವಾದಿ ಶಿಕ್ಷಕರ ಬಳಗವನ್ನು ಹುರಿದುಂಬಿಸುತ್ತಾ ಕಲಿಕೆಗೆಉತ್ತಮ ವಾತಾವರಣ ನಿರ್ಮಿಸಿದ್ದಾರೆ. ಜಿಲ್ಲಾ ಟಾಲ್ಪ್ ಸಂಪನ್ನೂಲವ್ಯಕ್ತಿ ಎಂ.ಎಂ.ಓಬಾಲೆ, ವಿಜ್ಞಾನ ಶಿಕ್ಷಕ ಸಂತೋಷ ಪಟ್ಟಣಶೆಟ್ಟಿ, ರಮೇಶ ಬಳ್ಳಾ ಅಷ್ಟೇ ಅಲ್ಲದೇ ಲಲಿತಾ ಅಂಗಡಿ, ಸುವರ್ಣಾ ಬಿರಾದಾರ, ವೈ.ಜಿ. ತಳವಾರ, ಎಸ್.ಎಫ್.ಬೇಸಗಾರ, ಎಸ್.ಎಸ್. ಚಳ್ಳಗಿಡದ, ಪಿ.ಆರ್.ಮೂಲಂಗಿ, ದೇವರಾಜ ಅಡ್ಡಿ ಅವರಂತ ಪ್ರತಿಭಾವಂತ ಶಿಕ್ಷಕರನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.