ADVERTISEMENT

ರಬಕವಿ ಬನಹಟ್ಟಿ: ಒಂದೂವರೆ ಎಕರೆ ಪ್ರದೇಶದಲ್ಲಿ ನಾಲ್ಕು ಬೆಳೆ

6 ತಿಂಗಳ ಕಾಲ ನಿರಂತರ ಆದಾಯ

ವಿಶ್ವಜ ಕಾಡದೇವರ
Published 30 ಆಗಸ್ಟ್ 2024, 4:20 IST
Last Updated 30 ಆಗಸ್ಟ್ 2024, 4:20 IST
ಬನಹಟ್ಟಿ ಸಮೀಪದ ಯಲ್ಲಟ್ಟಿಯ ಮಾರ್ಗದಲ್ಲಿ ರೈತ ದಯಾನಂದ ಹೊರಟ್ಟಿ ಹೀರೇಕಾಯಿ ಬೆಳೆದಿರುವುದು
ಬನಹಟ್ಟಿ ಸಮೀಪದ ಯಲ್ಲಟ್ಟಿಯ ಮಾರ್ಗದಲ್ಲಿ ರೈತ ದಯಾನಂದ ಹೊರಟ್ಟಿ ಹೀರೇಕಾಯಿ ಬೆಳೆದಿರುವುದು   

ರಬಕವಿ ಬನಹಟ್ಟಿ: ಕೇವಲ ಒಂದೂವರೆ ಎಕರೆ ಭೂ ಪ್ರದೇಶದಲ್ಲಿ ಅವರೆಕಾಯಿ, ಹಾಗಲಕಾಯಿ, ಹೀರೇಕಾಯಿ ಮತ್ತು ಬದನೆಕಾಯಿಗಳನ್ನು ಬೆಳೆಯುತ್ತಿರುವ ದಯಾನಂದ ಹೊರಟ್ಟಿ ಮುಂದಿನ ಆರು ತಿಂಗಳುಗಳ ಕಾಲ ನಿರಂತರ ಆದಾಯದತ್ತ ಗಮನ ನೀಡಿದ್ದಾರೆ.

ವಾಣಿಜ್ಯ ಬೆಳೆಗಳ ಜೊತೆಗೆ ತೋಟಗಾರಿಕೆಯ ಬೆಳೆಗಳನ್ನು ಬೆಳೆಯುತ್ತಿರುವ ದಯಾನಂದ ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.

ದಯಾನಂದ ಅವರ ತೋಟದಲ್ಲಿ ಸದ್ಯ ಹೀರೇಕಾಯಿ ಫಸಲು ಬರಲು ಆರಂಭವಾಗಿದೆ. ದಿನವೂ ಏಳೆಂಟು ಟ್ರೇಗಳಷ್ಟು ಹೀರೇಕಾಯಿಗಳನ್ನು ಸ್ಥಳೀಯ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ಟ್ರೇ ಅಂದಾಜು ₹ 350 ರಿಂದ ₹ 400ಕ್ಕೆ ಮಾರಾಟವಾಗುತ್ತಿದೆ. ಒಂದು ಟ್ರೇನಲ್ಲಿ 14 ಕೆ.ಜಿಗಳಷ್ಟು ಇರುತ್ತದೆ.

ADVERTISEMENT

ನಾಟಿ ಮಾಡಿದ ಒಂದೂವರೆ ತಿಂಗಳಲ್ಲಿ ಹೀರೇಕಾಯಿ, ನಂತರ ಎರಡು ತಿಂಗಳ ನಂತರ ಹಾಗಲಕಾಯಿ, ಎರಡೂವರೆ ತಿಂಗಳ ನಂತರ ಅವರೆಕಾಯಿ ಹಾಗೂ ಬದನೆಕಾಯಿ ಬೆಳೆಗಳು ಒಂದಾದ ನಂತರ ಒಂದು ಬರುತ್ತವೆ.

ಈ ನಾಲ್ಕು ಬೆಳೆಗಳು ಮುಂದಿನ ಆರು ತಿಂಗಳುಗಳವರೆಗೆ ಅವರಿಗೆ ನಿರಂತರ ಆದಾಯ ತಂದು ಕೊಡುತ್ತವೆ.

ಸಸಿ, ಮಲ್ಚಿಂಗ್ ಪೇಪರ್, ಕಟ್ಟಿಗೆ, ಮೀನಿನ ಬಲೆ ಸೇರಿದಂತೆ ಇದುವರೆಗೆ ಅಂದಾಜು ₹ 25 ಸಾವಿರದಷ್ಟು ವೆಚ್ಚ ಮಾಡಲಾಗಿದೆ. ದಯಾನಂದ ಹೊರಟ್ಟಿ ತಮ್ಮ ತೋಟದ ಬೆಳೆಗಳಿಗೆ ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ಗೋಕೃಪಾಮೃತ, ಡಿ. ಕಾಂಪೋಸ್ಟ್‌, ಎರೆಹುಳು ಜಲವನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಇಳುವರಿ ಹೆಚ್ಚಾಗಿ ಬರುತ್ತಿದೆ. ಎಲ್ಲ ರೀತಿಯ ಹವಾಮಾನದಲ್ಲಿಯೂ ಈ ಬೆಳೆಗಳಿಗೆ ಅನುಕೂಲವಾಗುತ್ತದೆ.

ಹೊರಟ್ಟಿಯವರ ತೋಟಕ್ಕೆ ಗ್ರಾಹಕರು ಮತ್ತು ಮಾರಾಟಗಾರರು ಬಂದು ಹೀರೇಕಾಯಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಉಪನ್ಯಾಸಕ ರಾಮನಗೌಡ ಅವರ ಮಾರ್ಗದರ್ಶನದಲ್ಲಿ ಹೀರೇಕಾಯಿ ಬೆಳೆಯಲಾಗುತ್ತಿದೆ ಎಂದು ದಯಾನಂದ ಹೊರಟ್ಟಿ ತಿಳಿಸಿದರು.

ಮೀನಿನ ಬಲೆ ಅಳವಡಿಕೆ

ಹೀರೆ ಅವರೆ ಹಾಗೂ ಹಾಗಲಕಾಯಿಗಳನ್ನು ಬೆಳೆಯಲು ಮೀನಿನ ಬಲೆಯನ್ನು ಅಳವಡಿಕೆ ಮಾಡಿದ್ದಾರೆ. ಬಳ್ಳಿಗಳನ್ನು ಮೀನಿನ ಬಲೆಗೆ ಹಾಕುವುದರಿಂದ ಬಳ್ಳಿಗಳು ಕೆಳಗಡೆ ಬೀಳುವುದಿಲ್ಲ. ಇದರಿಂದ ಇಳುವರಿ ಕೂಡ ಹೆಚ್ಚಾಗಿ ಬರುತ್ತದೆ ಮತ್ತು ಕಾಯಿಗಳ ಕೆಡುವುದಿಲ್ಲ ಎನ್ನುತ್ತಾರೆ ದಯಾನಂದ ಹೊರಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.