ADVERTISEMENT

ಲಾರಿ ಚಾಲಕನಿಗೆ ಕಿರುಕುಳ; ನಾಲ್ವರು ಪೊಲೀಸರು ಅಮಾನತು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 12:29 IST
Last Updated 7 ಮಾರ್ಚ್ 2022, 12:29 IST

ಬಾಗಲಕೋಟೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ತಡೆದು ಚಾಲಕನಿಗೆ ವಿನಾಕಾರಣ ಕಿರುಕುಳ ನೀಡಿದ ಆರೋಪದ ಮೇಲೆ ಬಾದಾಮಿ ತಾಲ್ಲೂಕಿನ ಕೆರೂರು ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಯನ್ನು ಎಸ್ಪಿ ಲೋಕೇಶ ಜಗಲಾಸರ್ ಸೋಮವಾರ ಅಮಾನತು ಮಾಡಿದ್ದಾರೆ.

ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಎಫ್.ವೈ. ತಳವಾರ, ಹೆಡ್‌ಕಾನ್‌ಸ್ಟೆಬಲ್ ಎಸ್.ಎಸ್. ಕುಲಕರ್ಣಿ, ಕಾನ್‌ಸ್ಟೆಬಲ್ ಎಲ್.ಯು. ಬಿರಾದಾರ ಹಾಗೂ ಚಾಲಕ ಮಹಾಂತೇಶ ಪೂಜಾರ ಅಮಾನತುಗೊಂಡವರು. ಎಲ್ಲರೂ ಹೆದ್ದಾರಿ ಗಸ್ತು ವಾಹನದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ವಿಜಯಪುರದಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಕೇರಳ ನೋಂದಣಿಯ ಲಾರಿಯನ್ನು ಕೆರೂರು ಹೊರವಲಯದಲ್ಲಿ ಈ ತಂಡ ತಡೆದು ಪರಿಶೀಲನೆ ನಡೆಸಿತ್ತು. ಲಾರಿ ಚಾಲಕನ ಬಳಿ ಅಗತ್ಯ ದಾಖಲೆಗಳು ಇದ್ದರೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪೊಲೀಸರು ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಘಟನೆಯ ಧ್ವನಿ ಮುದ್ರಿಸಿಕೊಂಡು ಎಸ್ಪಿ ಅವರಿಗೆ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ADVERTISEMENT

’ಗಸ್ತು ವೇಳೆ ವಾಹನಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸದಂತೆ ಹೆದ್ದಾರಿ ಗಸ್ತು ತಂಡಕ್ಕೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಆದರೂ ದುರುದ್ದೇಶದಿಂದ ಲಾರಿ ನಿಲ್ಲಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾದ ಕಾರಣ ಅಮಾನತು ಮಾಡಲಾಗಿದೆ‘ ಎಂದು ಎಸ್ಪಿ ಲೋಕೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.